ವಿಜಯಪುರ, ಮೇ 21: ವಿಜಯಪುರಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಹೊರವಲಯದಲ್ಲಿರುವ ಶೆಡ್ವೊಂದರಲ್ಲಿ ಭಾನುವಾರ 8 ವಿವಿಪ್ಯಾಟ್ ಬಾಕ್ಸ್ಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ದೊರೆತಿರುವ ವಿವಿಪ್ಯಾಟ್ಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ, ದೂರು ದಾಖಲಿಸಲು ಸೂಚಿಸಲಾಗಿದೆ. ವಿಜಯಪುರ ಜಿಲ್ಲೆಯ ಎಲ್ಲಾ 2,744 ವಿವಿಪ್ಯಾಟ್ಗಳು ಸ್ಟ್ರಾಂಗ್ ರೂಂ ನಲ್ಲಿ ಸುರಕ್ಷಿತವಾಗಿದ್ದು, ದೊರೆತಿರುವ ವಿವಿಪ್ಯಾಟ್ ಕೇವಲ ಖಾಲಿ ಬಾಕ್ಸ್ಗಳಾಗಿದ್ದು, ಅದರಲ್ಲಿ ಯಾವುದೇ ಯಂತ್ರಗಳಿಲ್ಲ, ಯನಿಕ್ ಐಡಿ ನಂಬರ್ಗಳೂ ಅದರಲ್ಲಿಲ್ಲ. ಅಲ್ಲದೇ, ಅವು ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ವಿವಿಪ್ಯಾಟ್ಗಳೂ ಅಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟಣ್ಣವರ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಭಾನುವಾರ ವಿವಿಪ್ಯಾಟ್ ಗಳು ಪತ್ತೆಯಾದ ತಕ್ಷಣ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಸುದ್ದಿ ಹರಡಿ , ವಿಜಯಪುರ ನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಿಫ್ ಅವರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಬಳಿಕ ಜಿಲ್ಲಾಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆ ಕೊಟ್ಟಪ್ರತಿಭಟನೆ ಹಿಂತೆಗೆದುಕೊಂಡಿತ್ತು.