ಮಂಜೇಶ್ವರ, ಮೇ 21 : ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಕಟ್ಟಿಗೆ ತುಂಬಿಡಲಾಗಿದ್ದ ಗೋಡೌನ್ನಲ್ಲಿ ಪತ್ತೆಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಸುಂಕದಕಟ್ಟೆಯ ವರ್ಕಾಡಿಯಲ್ಲಿ ಬೆಳಕಿಗೆ ಬಂದಿದೆ. ಮೃತ ಬಾಲಕ 9 ಹರೆಯದ ಸಾವಂತ್ ಕುಮಾರ್. ಈತ ಸುಂಕದಕಟ್ಟೆಯ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ ಬಾಲಕ ಬಳಿಕ ನಾಪತ್ತೆಯಾಗಿದ್ದ.
ಇದೀಗ ಬಾಲಕನ ಮೃತದೇಹ ಬೇಕರಿ ಜಂಕ್ಷನ್ ಬಳಿ ಇರುವ ಕಟ್ಟಿಗೆ ಗೋಡೌನ್ನಲ್ಲಿ ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಮನೆ ಮಂದಿ ಇದು ಕೊಲೆ ಶಂಕೆ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಪೋಸ್ಟ್ ಮಾರ್ಟಂ ವರದಿ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.