ಬೆಂಗಳೂರು, ಮೇ 21: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇನ್ನು ಕೇವಲ ದಿನ ಎಂದು ಬಿಜೆಪಿ ಮಾತನಾಡಿಕೊಳ್ಳುತ್ತಿದ್ದು ಇದಕ್ಕೆ ಕಾಲವೇ ಉತ್ತರಿಸಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪೂರ್ಣ ಅವಧಿಯನ್ನು ಪೂರೈಸಲಿದ್ದು, ಬಳಿಕ ನಾನು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಮೇ 21 ರ ಸೋಮವಾರ ಉತ್ತರಿಸಿ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ತನ್ನ ಸಂಪೂರ್ಣ ಕಾಲಾವಧಿಯನ್ನು ಪೂರೈಸಲಿದೆ. ಪ್ರಸ್ತುತ ನಮ್ಮ ಮುಂದೆ ಸಾಕಷ್ಟು ಸವಾಲುಗಳಿದ್ದು, ಅವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯನ್ನು ಇಡಲಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ನಿರ್ಧಾರದಂತೆ, ಸ್ಥಳೀಯ ಪಕ್ಷ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಕೈಗೊಂಡೆವು. ಮುಂದೆ ಎಲ್ಲಾ ಕಹಿಗಳನ್ನು ನುಂಗಲೇ ಬೇಕಿದೆ. ಇದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.