ಕೊಚ್ಚಿ, ಮೇ 21 : ಉತ್ತರ ಕೇರಳದಲ್ಲಿ ಮಾರಕ ‘ನಿಪಾ ವೈರಸ್’ ಸೋಂಕಿಗೆ ಬಲಿಯಾದವರ ಸಂಖ್ಯೆ 11ಕ್ಕೇರಿದ್ದು ಕೇರಳ ರಾಜ್ಯಾದ್ಯಂತ ಜನರು ಆತಂಕದಲ್ಲಿದ್ದು, ಈಗಾಗಲೇ ಸರ್ಕಾರ ಆರೋಗ್ಯ ಸಂಬಂಧಿ ಹೈ ಅಲರ್ಟ್ ಘೋಷಣೆ ಮಾಡಿದೆ. ಒಂದೇ ಕುಟುಂಬದ ಮೂವರು ಹಾಗೂ ಈ ಮೂವರನ್ನೂ ಉಪಚರಿಸುತ್ತಿದ್ದ ಒಬ್ಬ ದಾದಿಯೂ ಈ ವೈರಸ್ ತಗುಲಿ ಮೃತಪಟ್ಟಿದ್ದೂ, ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇದಕ್ಕೆಂದೇ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.
ಈ ನಿಪಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗೆ ತರಹೇವಾರಿ ಸುದ್ದಿಗಳು ಹರಿದಾಡುತ್ತಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ, ವದಂತಿಗಳಿಗೆ ಕಿವಿಗೊಡಬೇಡದಂತೆ ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರ ಈ ಕುರಿತಂತೆ ಎನ್ಸಿಬಿಸಿ ತಂಡವನ್ನು ಕೇರಳಕ್ಕೆ ರವಾನಿಸಿದೆ. ಮಣಿಪಾಲ್ ಮತ್ತು ಅಪೋಲೊ ಆಸ್ಪತ್ರೆಯ ವೈರಾಲಜಿ ವಿಭಾಗದ ತಜ್ಞರು ಪೆರಂಬಾರಾ ಪ್ರದೇಶಕ್ಕೆ ಭೇಟಿ ಕೊಟ್ಟು ಸೋಂಕು ಪೀಡಿತರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.
ನಿಪಾ ವೈರಸ್ ಸಾಮಾನ್ಯವಾಗಿ ಬಾವಲಿಯ ಮೂತ್ರದಲ್ಲಿ ಅಡಗಿರುತ್ತದೆ. ಈ ರೋಗದ ಲಕ್ಷಣಗಳೆಂದರೆ ವಿಪರೀತ ತಲೆನೋವು, ಜ್ವರ, ಆಯಾಸ ಸ್ಥಿತಿ. ಮಲೇಶಿಯಾದಲ್ಲಿ ನಿಪಾ ವೈರಸ್ ಗೆ 50 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ನಿಪಾ ವೈರಸ್ಗೆ ನಿಖರವಾದ ಚಿಕಿತ್ಸೆಯಿಲ್ಲ ಎಂದು ತಿಳಿದುಬಂದಿದೆ.