ಕಾಸರಗೋಡು, ಮೇ 20 : ಮುಂಬೈ ವ್ಯಾಪಾರಿಯನ್ನು ಅಪಹರಿಸಿ ಹಲ್ಲೆ ನಡೆಸಿ ಒಂದು ಲಕ್ಷ ರೂಪಾಯಿ ಹಫ್ತಾ ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂದ್ಯೋಡಿನ ಮುನವ್ವರ್ (20) ಮತ್ತು ಅಡ್ಕ ಬೈದಲದ ಸಜೀರ್ ( 31) ಎಂದು ಗುರುತಿಸಲಾಗಿದೆ.
ಮಂಜೇಶ್ವರ ಕಡಂಬಾರ್ ನಲ್ಲಿ ವಾಸವಾಗಿರುವ ಕರ್ನಾಟಕ ಮೂಲದ ಲೆಸ್ಟರ್ ಡಿ ಸೋಜ ಎಂಬವರನ್ನು ಶನಿವಾರ ಬೆಳಿಗ್ಗೆ ಬೇಕೂರು ಶಾಂತಿಗುರಿ ಎಂಬಲ್ಲಿ ತನ್ನ ವಾಹನ ತಡೆದ ಆರು ಮಂದಿಯ ತಂಡ ಕಾರೊಂದರಲ್ಲಿ ಅಪಹರಿಸಿದ್ದು ಬಂದ್ಯೋಡ್ ಅಡ್ಕ ಬಳಿ ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿ ಒಂದು ಲಕ್ಷ ರೂ . ಗೆ ಬೇಡಿಕೆ ಇಟ್ಟಿದ್ದು , ಬಳಿಕ ಪೊಸಡಿಗುಂಪೆಗೆ ಕೊಂಡೊಯ್ದು ಅಲ್ಲಿ ಕೂಡಾ ಹಲ್ಲೆ ನಡೆಸಿದ್ದು , ಈ ಸಂದರ್ಭದಲ್ಲಿ ಸ್ನೇಹಿತನ ಮೂಲಕ ಪೊಲೀಸ್ ಕಂಟ್ರೋಲ್ ರೂo ಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಎಚ್ಚೆತ್ತ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ಎ. ಶ್ರೀನಿವಾಸ್ ಕುಂಬಳೆ ಮತ್ತು ಮಂಜೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ಕಾರ್ಯಾಚರಣೆ ಕುರಿತ ಅರಿತ ತಂಡವು ಲೆಸ್ಟರ್ ನನ್ನು ದಾರಿ ಮಧ್ಯೆ ತೊರೆದು ಪರಾರಿಯಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನಾಲ್ವರಿಗಾಗಿ ಶೋಧ ನಡೆಸುತ್ತಿದ್ದಾರೆ . ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.