ಬೆಂಗಳೂರು, ಮೇ 20: ಕರ್ನಾಟಕದ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಅನುಗ್ರಹದಲ್ಲಿ, ನಿಯೋಜಿತ ಮುಖ್ಯಮಂತ್ರಿ ಜೆಡಿಎಸ್ ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಉಳಿಯೋದು ಡೌಟು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಜ್ಯೋತಿಷ್ಯವನ್ನು ಸ್ವಲ್ಪ ಹೆಚ್ಚಾಗಿಯೇ ನಂಬುವ ಹೆಚ್ ಡಿಕೆ ಅನುಗ್ರಹದಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಸರ್ಕಾರಿ ಬಂಗಲೆ ಅನುಗ್ರಹದಲ್ಲಿ ವಾಸ್ತು ಸರಿಯಿಲ್ಲ, ಇದು ಕುಮಾರಸ್ವಾಮಿ ಅವರ ಏಳಿಗೆಗೆ ಸಮರ್ಪಕವಲ್ಲ ಎಂದು ಕೆಲ ಸೂಚನೆಗಳು ಕೆಲ ವಾಸ್ತು ತಜ್ಞರಿಂದ ಕುಮಾರಸ್ವಾಮಿ ಅವರಿಗೆ ದೊರಕಿದೆ ಎನ್ನಲಾಗಿದ್ದು, ಹೀಗಾಗಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.