ವಿಟ್ಲ, ಮೇ 20 : ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಗೆ ಸಿದ್ದತೆ ನಡೆಸುತ್ತಿರುವಂತೆಯೇ ಇತ್ತ ವಿಟ್ಲ ಪರಿಸರದಲ್ಲಿ ಇತ್ತಂಡಗಳ ನಡುವೆ ಘರ್ಷಣೆ ನಡೆದಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕಿನಲ್ಲಿ ವಿಜಯೋತ್ಸವ ಆಚರಿಸುತ್ತಾ ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುಸುವ ವೇಳೆ ಬಿಜೆಪಿಗೆ ದಿಕ್ಕಾರ ಎಂದು ಘೋಷಣೆ ಕೂಗಿದ್ದು ಈ ವೇಳೆ ಇತ್ತಂಡಗಳ ನಡುವೆ ಮಾತಿನ ಚಕಮಕಿ ಆರಂಭವಾಯಿತು ಎನ್ನಲಾಗಿದೆ. ಇನ್ನು ಕೊಳ್ನಾಡು ಗ್ರಾಮದ ಕುಡ್ತಮುಗೇರುವಿನಲ್ಲಿಯೂ ಗುಂಪು ಘರ್ಷಣೆ ಸಂಭವಿಸಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಶರತ್ ಹಾಗೂ ಧನರಾಜ್ ಸೇರಿ ನಾಲ್ವರು ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇದೇ ಸಂದರ್ಭ ಮಂಗಳಪದವಿನಲ್ಲಿ ಪೊಲೀಸರು ಬಿಜೆಪಿ ಮುಖಂಡರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆಂಬ ಆರೋಪವೂ ವ್ಯಕ್ತವಾಗಿದ್ದು ಎಪಿಎಂಸಿ ಮಾಜಿ ಅಧ್ಯಕ್ಷ ಸಂಕಪ್ಪ ಗೌಡ ಅವರು ಮನೆಯಲ್ಲಿ ಮಲಗಿದ್ದಾಗ, ಏಕಾಏಕಿ ಪೊಲೀಸರು ನುಗ್ಗಿ ಮನೆಯಲ್ಲಿದ್ದ ಯುವಕರ ಮೇಲೆ ಲಾಠಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಮಾಯಕರಿಗೆ ಹಲ್ಲೆ ನಡೆಸುತ್ತಿರುವುದನ್ನು ಮಹಿಳೆಯರು ವಿಡಿಯೋ ಚಿತ್ರೀಕರಣ ನಡೆಸಿದ್ದು ಈ ವೇಳೆ ಪೊಲೀಸರು ಮಹಿಳೆಯರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಅದೇ ರೀತಿ ಕರೋಪಾಡಿ ಗ್ರಾಮದ ಕುಡ್ಪಲ್ತಡ್ಕ, ಕನ್ಯಾನ, ಮಂಗಳಪದವು, ಕುಡ್ತಮುಗೇರು, ಕೆಲಿಂಜ ಪರಿಸರದಲ್ಲಿ ವಿಜಯೋತ್ಸವ ವೇಳೆ ಘರ್ಷಣೆ ಉಂಟಾಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಅತಿರೇಕದ ಘೋಷಣೆ ಕೂಗಿದ್ದೇ ಈ ಘರ್ಷಣೆಗೆ ಕಾರಣವಾಗಿದ್ದೆನ್ನಲಾಗಿದೆ. ವಿಟ್ಲ ಭಾಗದಲ್ಲಿ ಪೊಲೀಸರು ನಾಕಾಬಂಧಿ ಅಳವಡಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ.