ಉಡುಪಿ, ಅ. 14 (DaijiworldNews/PY): ಆಟೋರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ ಕುರ್ಕಾಲಿನ ಮಹಿಳೆಯ 50 ಸಾವಿರ ರೂಪಾಯಿಯನ್ನು ಮರಳಿಸಿ ಆಟೋ ರಿಕ್ಷಾ ಚಾಲಕರೋರ್ವರು ಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ಕಟಪಾಡಿಯಲ್ಲಿ ನಡೆದಿದೆ. ಆಟೋರಿಕ್ಷಾ ಚಾಲಕ ಅಂಬಲಪಾಡಿ ಜಯ ಶೆಟ್ಟಿ ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ ಬಂದಿದ್ದು, ಇಳಿಯುವಾಗ ಗಡಿಬಿಡಿಯಲ್ಲಿ 50 ಸಾವಿರ ರೂಪಾಯಿ ಹಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು.
ವೇಳೆ ಮಹಿಳೆಯನ್ನು ಬಸ್ಸ್ಟ್ಯಾಂಡಿನಲ್ಲಿ ಬಿಟ್ಟು ಉಡುಪಿಯ ಕಾರ್ತಿಕ್ ಎಸ್ಟೇಟ್ ಸಮೀಪದ ಆಟೋ ಸ್ಟ್ಯಾಂಡಿಗೆ ಮರಳಿದ್ದ ರಿಕ್ಷಾ ಚಾಲಕ ಜಯ ಶೆಟ್ಟಿ ಎಂಬವರು ಸೀಟ್ನಲ್ಲಿ ಪ್ಲಾಸ್ಟಿಕ್ ಇರುವುದನ್ನು ಗಮನಿಸಿದ್ದಾರೆ. ತೆರೆದಾಗ ಅದರಲ್ಲಿ 50ಸಾವಿರ ಹಣವಿತ್ತು. ಆ ಕೂಡಲೇ ಉಡುಪಿಯಿಂದ ಕಟಪಾಡಿಗೆ ಬಂದು ಕುರ್ಕಾಲಿನ ಮಹಿಳೆಯನ್ನು ಸಂಪರ್ಕಿಸಿ, 50 ಸಾವಿರ ರೂಪಾಯಿ ಹಣವನ್ನು ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ಆಟೋ ರಿಕ್ಷಾ ಚಾಲಕರ ಮಾನವೀಯ ಗುಣವನ್ನು ಹಾಗೂ ಅವರು ಮಾಡಿದ ಉಪಕಾರವನ್ನು ಮಹಿಳೆ ಹಾಗೂ ಕಟಪಾಡಿಯ ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ. ಆಟೋರಿಕ್ಷಾ ಚಾಲಕ ಜಯ ಶೆಟ್ಟಿ ಅವರ ಈ ಕೆಲಸ ಇತರರಿಗೆ ಮಾದರಿಯೆನಿಸಿದೆ.