ನವ ದೆಹಲಿ, ಮೇ 19: ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗೆ ಆಗಿರುವ ಸೋಲು, ಪ್ರಜಾಪ್ರಭುತ್ವಕ್ಕೆ ದೊರಕಿರುವ ಗೆಲುವು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ನವ ದೆಹಲಿಯಲ್ಲಿ ಎಐಸಿಸಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಪ್ರಜಾಪ್ರಭುತ್ವವನ್ನು ಉಳಿಸಿದೆ. ಕರ್ನಾಟಕದ ಕೆಲ ಶಾಸಕರನ್ನು ಹಣದ ಬಲದಿಂದ ಕೊಳ್ಳುವ ಪ್ರಯತ್ನ ಮಾಡಲಾಯಿತು. ಭ್ರಷ್ಟಾಚಾರದ ವಿರುದ್ಧ ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಮೋದಿ ಅವರೇ ಕರ್ನಾಟಕದಲ್ಲಿ ಕುದುರೆ ವ್ಯಾಪಾರ ಮಾಡಲು ಮಾರ್ಗದರ್ಶನ ನೀಡಿದ್ದರು. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೇರವಾಗಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಧಿವೇಶನದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಅದಕ್ಕೆ ಗೌರವ ಕೂಡಾ ಕೊಡದೆ ಬಿಜೆಪಿಯ ಎಲ್ಲ ನಾಯಕರು ಎದ್ದು ಹೊರಕ್ಕೆ ಹೋಗಿದ್ದಾರೆ. ಇದು ಅವರ ದೇಶಭಕ್ತಿ. ಬಿಜೆಪಿಯವರ ಢೋಂಘಿ ದೇಶಪ್ರೇಮ ಎಲ್ಲರಿಗೂ ಅರಿವಾಗಬೇಕು. ಕೊಲೆ ಆರೋಪಿ ಅಮಿತ್ ಶಾ ಮತ್ತು ಭ್ರಷ್ಟ ನರೇಂದ್ರ ಮೋದಿ ಅವರಿಗೆ ಹಣವೇ ಎಲ್ಲ ಅಲ್ಲ, ಅದಕ್ಕಿಂತಲೂ ಮುಖ್ಯವಾದುದು ಸಂವಿಧಾನ ಎಂಬುದನ್ನು ತೋರಿಸಿದ್ದೀರಿ ಎಂದು ಹೇಳಿದರು.
ಕರ್ನಾಟಕದ ಜನ ಹಣ, ಪದವಿ ಎಲ್ಲದಕ್ಕಿಂತಲೂ ಸಂವಿಧಾನ ದೊಡ್ಡದು. ಪ್ರಜಾಪ್ರಭುತ್ವ ದೊಡ್ಡದು ಎಂದು ತೋರಿಸಿದ್ದಾರೆ. ಬಿಜೆಪಿಯು ಸಿಬಿಐ, ಇಡಿ, ಐಟಿ ಸೇರಿದಂತೆ ರಾಷ್ಟ್ರದಲ್ಲಿನ ಎಲ್ಲಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸಿತ್ತು. ಆದರೆ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾಗಿ ಅದರ ವಿರುದ್ಧ ಹೋರಾಡಿ ಜಯ ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.