ಬೆಂಗಳೂರು, ಮೇ 19: ಮೋದಿ ಹಿಟ್ಲರ್ ಆದರೆ, ಅಮಿತ್ ಶಾ ಗೋಬೆಲ್ಸ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಮತ್ತು ಅಮಿತ್ ಶಾ ಒತ್ತಡ ಹಾಕಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಮೋದಿ ಮತ್ತು ಶಾ ಗೆ ಗೌರವ ಇಲ್ಲ ಎಂದು ಕಾಣಿಸುತ್ತದೆ. ಅವರಿಬ್ಬರು ಸರ್ವಾಧಿಕಾರಿಗಳಾದ ಹಿಟ್ಲರ್ ಮತ್ತು ಗೋಬೆಲ್ಸ್ ಇದ್ದ ಹಾಗೆ. ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಧಿಕಾರಕ್ಕೆ ಬರಲು ಬಿಜೆಪಿ ವಾಮಮಾರ್ಗ ಅನುಸರಿಸಿರುವುದೇ ಕಾರಣ ಎಂದು ಕಿಡಿ ಕಾರಿದ್ದಾರೆ.
ರಾಜ್ಯಪಾಲರ ಮೇಲೆ ನರೇಂದ್ರ ಮೋದಿ, ಅಮಿತ್ ಶಾ ನಿಂದ ಒತ್ತಡ ಹಾಕಿಸಿ, ಸಂವಿಧಾನ ಹಾಗೂ ಸರ್ವೋಚ್ಛ ನ್ಯಾಯಾಲಯದ ತೀರ್ಪು ಇದ್ದರೂ ಕೂಡ, ಬಿಎಸ್ವೈ ಅವರನ್ನು ಕರೆದು ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ಮಾಡಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಪ್ರಭಾವ ಬಳಸಿ ರಾಜ್ಯಪಾಲರ ಮೂಲಕ ರಾಜಕೀಯ ಕುದುರೆ ವ್ಯಾಪಾರ ನಡೆಸಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬಹುಮತ ಇಲ್ಲದ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ಕೊಟ್ಟದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ ಎಂದು ಹೇಳಿದ್ದಾರೆ.