ಬೆಂಗಳೂರು, ಮೇ 19: ಬಹುಮತ ಸಾಬೀತು ಪಡಿಸಲು ಸಾಧ್ಯವಾಗದ ಹಿನ್ನೆಲೆ, ಯಡಿಯೂರಪ್ಪ ರಾಜೀನಾಮೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ.
ವಿಶ್ವಾಸ ಮತ ಗೆಲುವಿಗೆ ಪ್ರಾರ್ಥಿಸಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಮೂಡಿದೆ. ಮಾತ್ರವಲ್ಲ, ತವರು ಜಿಲ್ಲೆ ಶಿವಮೊಗ್ಗದಲ್ಲಿ ಕೂಡ ಸೂತಕದ ಛಾಯೆ ಕಾಣಿಸಿಕೊಂಡಿದೆ.
ವಿಧಾನಸಭೆಯಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದ ನಂತರ ಯಡಿಯೂರಪ್ಪ ಅವರು ಎಲ್ಲ ಶಾಸಕರೊಡನೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜೀನಾಮೆ ನೀಡುವ ಮೊದಲು ಯಡಿಯೂರಪ್ಪ ಒಂದು ಗಂಟೆ ಅವಧಿಯ ಭಾಷಣ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೀಗ, 1996ರಲ್ಲಿ ವಾಜಪೇಯಿ ಮಾಡಿದ್ದಂತೆ ಯಡಿಯೂರಪ್ಪ ಸಹ ವಿಶ್ವಾಸಮತ ಯಾಚಿಸುವ ಮೊದಲೇ ರಾಜೀನಾಮೆ ನೀಡಬಹುದು ಎಂದು ಮೂಲಗಳು ಹೇಳಿವೆ.