ಮಂಗಳೂರು, ಮೇ 19: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಚೀನಿಕಾಯಿಯೊಳಗೆ ಭಾರೀ ಪ್ರಮಾಣದಲ್ಲಿ ಗಾಂಜಾ ಅಡಗಿಸಿ ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿ ತಸ್ಲೀಂ ಎಂದು ಗುರುತಿಸಲಾಗಿದೆ.
ಈತನಿಂದ 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ 1.50 ಲಕ್ಷ ರೂಪಾಯಿ. ತಸ್ಲೀಂ ಮಂಗಳೂರಿನಿಂದ ದೋಹಾಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ತಸ್ಲೀಂ ಅವರ ಲಗೇಜ್ ಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಲಗೇಜ್ ನಲ್ಲಿ 4 ಚೀನಿಕಾಯಿಗಳು ಪತ್ತೆಯಾಗಿವೆ. ಚೀನಿಕಾಯಿಗಳನ್ನು ಟೊಳ್ಳಾಗಿಸಿ ಅದರಲ್ಲಿ ಗಾಂಜಾ ತುಂಬಿರುವುದು ಪತ್ತೆಯಾಗಿದೆ.
ತಸ್ಲೀಂನನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ದೋಹಾ ದಲ್ಲಿರುವ ಕೆಲವು ಗ್ರಾಹಕರಿಗಾಗಿ ಗಾಂಜಾ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಾಗಿದೆ.
ಇದೀಗ ತಸ್ಲೀಂನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿಗಳು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.