ಕುಂದಾಪುರ, ಮೇ 17 : ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಬಿಜೆಪಿ ಬೆಂಬಲಿಗರು ಕುಂದಾಪುರ ಕ್ಷೇತ್ರದ ಕೆಲವೆಡೆ ಮಹಿಳೆ ಸಹಿತ ಪಕ್ಷದ ಕಾರ್ಯಕರ್ತರಿಗೆ ಹಲ್ಲೆ ನಡೆಸಿರುವುದನ್ನು ಕಾಂಗ್ರೆಸ್ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ.
ಎಸ್ಪಿಗೆ ಮನವಿ
ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ, ಶಂಕರನಾರಾಯಣ, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮನೆ ಮುಂದೆ ಬಿಜೆಪಿ ಬೆಂಬಲಿಗರು ಹದ್ದು ಮೀರಿ ವಿಜಯೋತ್ಸವ ಆಚರಿಸಿದ್ದಲ್ಲದೆ, ಕಾಂಗ್ರೆಸ್ ಬೆಂಬಲಿಸಿದವರನ್ನು ಹುಡುಕಿ ಹಲ್ಲೆ ನಡೆಸಿದ್ದಾರೆ. ಇದು ಖಂಡನೀಯ. ಈ ಕುರಿತು ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದೇವೆ. ಎಸ್ಪಿಗೂ ಮನವಿ ಸಲ್ಲಿಸಲಾಗುವುದು ಎಂದವರು ಹೇಳಿದರು.
ಕಠಿನ ಕ್ರಮ ಕೈಗೊಳ್ಳಲಿ
ಮನೆಯಲ್ಲಿ ಮಹಿಳೆಯರೆಲ್ಲ ಇದ್ದಾಗ ಬಂದು ಪಟಾಕಿ ಸಿಡಿಸಿ, ಬುಲೆಟ್ ಬಕ್ನಿಂದ ಜೋರು ಶಬ್ದ ಮಾಡುತ್ತಾರೆ. 5 ತಿಂಗಳ ಪುಟ್ಟ ಮಗುವಿದ್ದು, ಅದಕ್ಕೆ ಆಕ್ಷೇಪಿಸಿದ್ದೇನೆ. ಅದಕ್ಕೆ ಮರುದಿನ 20-25 ಮಂದಿ ಬಿಜೆಪಿಯ ಯುವಕರು ಹಲ್ಲೆ ಮಾಡಿದ್ದಾರೆ. ನನ್ನ ಮೇಲೆ ದಾಳಿ ಮಾಡಲಿ. ಆದರೆ ಮನೆಯಲ್ಲಿರುವ ಮಹಿಳೆಯರ ಮೇಲೆಲ್ಲ ಹಲ್ಲೆ ನಡೆಸಿರುವುದು ಎಷ್ಟು ಸರಿ. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರ ಮೇಲೆ ಈ ಬಿಜೆಪಿಗರು ಹಲ್ಲೆ ಮಾಡುತ್ತಿದ್ದಾರೆ. ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಹಲ್ಲೆಗೊಳಗಾದ ಹಲ್ತೂರಿನ ವಿಜಯ ಪೂಜಾರಿ ಆಗ್ರಹಿಸಿದರು.
ಈ ಕುರಿತಂತೆ ಸ್ಥಳೀಯರ ನಾಯಕರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ ಈ ಬಗ್ಗೆ ಯಾವುದೇ ರಾಜಿ ಸಂಧಾನ ಮಾಡಿಕೊಳ್ಳುವುದಿಲ್ಲ. ನಮ್ಮ ಪಕ್ಷದವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಲ್ಲೆಗೊಳಗಾದ ಹಲ್ತೂರಿನ ಲಕ್ಷ್ಮಿ ಪೂಜಾರ್ತಿ, ಕಾಂಗ್ರೆಸ್ನ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಮಾಣಿ ಗೋಪಾಲ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಪುತ್ರನ್, ನಗರಾಧ್ಯಕ್ಷ ಗಣೇಶ ಶೇರಿಗಾರ್, ಐಟಿ ಸೆಲ್ನ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ವಿನೋದ್ ಕ್ರಾಸ್ತ, ಉಪಸ್ಥಿತರಿದ್ದರು.
ಅಪಪ್ರಚಾರದಿಂದ ಸೋಲು
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಕೂಡ ಬಿಜೆಪಿಗರ ಅಪಪ್ರಚಾರದಿಂದ ಸೋಲಾಗಿದೆ. ಕುಂದಾಪುರದಲ್ಲೂ ನನ್ನನ್ನು ಹೊರಗಿನವನು ಎಂದು ಬಿಜೆಪಿಗರು ಅಪಪ್ರಚಾರ ನಡೆಸ ತೊಡಗಿದರು. ಆದರೆ ನಾವು ನಮ್ಮ ಕಾರ್ಯಕರ್ತರ ಮೇಲಿನ ಹಲ್ಲೆಗಳಿಗೆಲ್ಲ ಹೆದರುವುದಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಲಾಗುವುದು. - ರಾಕೇಶ್ ಮಲ್ಲಿ, ಇಂಟಕ್ ರಾಜ್ಯಾಧ್ಯಕ್ಷ