ಉಡುಪಿ, ಅ. 03(DaijiworldNews/PY): ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು, ಒಳರೋಗಿ ಸೇವೆಗಳು , ನಾನ್ - ಓ ಪಿ ಡಿ ವಿಶೇಷ ಸೇವೆಗಳು ಮತ್ತು ಆರೋಗ್ಯ ತಪಾಸಣೆ ಪ್ಯಾಕೇಜ್ ಸೇರಿದಂತೆ ಎಲ್ಲಾ ವಿಭಾಗಗಳು ಅ.5ರಿಂದ ಸಾರ್ವಜನಿಕರಿಗೆ ಸೇವೆಗೆ ಮುಕ್ತವಾಗಲಿದೆ. ಸಾರ್ವಜನಿಕರು ಮತ್ತು ರೋಗಿಗಳು ಈ ಎಲ್ಲಾ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹೇಳಿದ್ದಾರೆ.
ಈ ಹಿಂದಿನಂತೆ ದಿನವಹಿ ಘಟಕಗಳಂತೆ ಹೊರ ರೋಗಿ ಮತ್ತು ಒಳರೋಗಿ ಸೌಲಭ್ಯ ದೊರೆಯಲಿದೆ. ಎಲ್ಲ ರೀತಿಯ ಶಸ್ತ್ರ ಚಿಕಿತ್ಸಾ ಸೌಲಭ್ಯ ಕೂಡ ದೊರೆಯಲಿದೆ. ಆದರೆ ಶಸ್ತ್ರ ಚಿಕಿತ್ಸೆಗೆ ಒಳರೋಗಿಯಾಗಿ ಸೇರ್ಪಡೆಯಾಗಲು ಕೊರೊನಾ ಪರೀಕ್ಷೆ (ಆರ್ಟಿಪಿಸಿಆರ್) ಕಡ್ಡಾಯವಾಗಿದೆ. ಒಂದು ವೇಳೆ ತಮ್ಮ ಊರಿನಲ್ಲಿಯೇ ಮಾಡಿಸಿದ್ದರೆ ಗಂಟಲ ದ್ರವ ತೆಗೆದ 96 ಘಂಟೆಗಳವರೆಗೆ ಮಾತ್ರ ಊರ್ಜಿತವಾಗಿರುತ್ತದೆ. ಇಲ್ಲವಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳರೋಗಿಯಾಗಿ ಸೇರ್ಪಡೆಗೊಳಿಸುವ ಮೊದಲು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದ್ದಾರ
ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಂದು ರೋಗಿಯು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು. ನಂತರ ಸಂಬಂಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಪ್ರತೀ ರೋಗಿಗಳೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.