ಮಂಗಳೂರು, ಮೇ 15: ದ.ಕ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಇದೀಗ ಕಾಂಗ್ರೆಸ್ ಅಭ್ಯರ್ಥಿಗಳು ‘ಇವಿಎಂ ಬಗ್ಗೆ ಸಂಶಯವಿದೆ’ ಎಂದು ಆಕ್ಷೇಪ ದಾಖಲಿಸಿದ್ದಾರೆ.
ಬೋಂದೆಲ್ನಲ್ಲಿರುವ ಮತ ಎಣಿಕೆಯ ಕೇಂದ್ರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿಗಳು ‘ಇವಿಎಂ ಬಗ್ಗೆ ಸಂಶಯವಿದೆ’. ಕಾಂಗ್ರೆಸ್ ಪಕ್ಷವು 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿತ್ತು. ಆದರೆ ಫಲಿತಾಂಶ ಸಂಪೂರ್ಣ ಬದಲಾಗಿದೆ ಎಂದು ಆಕ್ಷೇಪ ದಾಖಲಿಸಿದರು.
ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷವು 1 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ನೇತೃತ್ವದಲ್ಲಿ ಪಕ್ಷದ ಇತರ 7 ಅಭ್ಯರ್ಥಿಗಳು ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿ ರಿಟರ್ನಿಂಗ್ ಆಫೀಸರ್ ಮುಂದೆ ಆಕ್ಷೇಪ ದಾಖಲಿಸಿದ್ದಾರೆ.
ಮಾತ್ರವಲ್ಲ ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.