ಮಂಗಳೂರು, ಮೇ 15: ದ.ಕ. ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರಬಿಂದುವಾಗಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವೇದವ್ಯಾಸ್ ಕಾಮತ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಾಲಿಗೆ 2018ರ ಚುನಾವಣೆ ಕುತೂಹಲಕಾರಿಯಾಗಿ ಪರಿಣಮಿಸಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ವೇದವ್ಯಾಸ್ ಕಾಮತ್ ವಿಜಯದ ನಗೆ ಬೀರಿದ್ದಾರೆ.
ಕಳೆದ ಬಾರಿಯ ಗೆಲುವನ್ನು ಕಾಯ್ದಿರಿಸಿಕೊಳ್ಳಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ಪಟ್ಟಿದ್ದರೆ, ಮತ್ತೊಂದೆಡೆ ತನ್ನ ಭದ್ರಕೋಟೆಯೆಂದೇ ಪರಿಗಣಿಸಿದ್ದರೂ ಕಳೆದ ವರ್ಷ ಕೈತಪ್ಪಿ ಹೋದ ಕ್ಷೇತ್ರವನ್ನು ಬಿಜೆಪಿ ಮತ್ತೆ ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನು ಅಷ್ಟೇ ಪೈಪೋಟಿಯಿಂದ ನಡೆಸಿತ್ತು. ಅದರಂತೆ ವಿಜಯದ ಮಾಲೆ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯ ಕೊರಳಿಗೆ ಬಿದ್ದಿದೆ.
ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ ವಿರುದ್ಧ ವೇದವ್ಯಾಸ್ ಕಾಮತ್ ಈ ಬಾರಿ ಸ್ಪರ್ಧಿಸಿದ್ದು, ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ವಿಜಯದ ನಗೆ ಬೀರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವೇದವ್ಯಾಸ್ ಕಾಮತ್ ಅವರಿಗೆ ಒಟ್ಟು 59,082ಮತಗಳು ಬಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ 43,716 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ.
35 ವರ್ಷಗಳ ಕಾಲ ಸರಕಾರಿ ಅಧಿಕಾರಿಯಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಆಡಳಿತಾನುಭವ ಹೊಂದಿರುವ ಲೋಬೊ ಅವರು 2013ರ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಈ ಬಾರಿಯೂ ಲೋಬೋ ಅಧಿಕಾರದ ಗದ್ದುಗೆ ಏರುತ್ತಾರೆ ಅನ್ನುವ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಆದರೆ ಲೆಕ್ಕಾಚಾರ ಬದಲಾಗಿದ್ದು, ವೇದವ್ಯಾಸ್ ಕಾಮತ್ ಭರ್ಜರಿ ಗೆಲುವು ಸಾಧಿಸಿದ್ದಾರೆ.