ಬೈಂದೂರು, ಸೆ23: ಮುಂದಿನ ಪಿಳೀಗೆಗೆ ಸರಿಯಾದ ತರಬೇತಿ ನೀಡಿ, ಯುವಕರನ್ನು ಸಂಘಟಿಸಿ, ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಉತ್ತಮ ನಾಯಕರನ್ನಾಗಿಸುವ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೆಮ್ಮಾಡಿಯ ಲಕ್ಷ್ಮೀ ನಾರಾಯಣ ದೇವಳದ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಅವರು ಬೈಂದೂರು ಕ್ಷೇತ್ರಕ್ಕೆ ನನ್ನ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ. ಈ ಬಗ್ಗೆ ಕೆಲವರು ಆಕ್ಷೇಪವನ್ನೂ ಕೂಡ ಮಾಡಿದ್ದರು. ಅದಕ್ಕೆ ಅವರಿಗೆ ಉತ್ತರವನ್ನೂ ನೀಡಿದ್ದೇನೆ. ಬೈಂದೂರು ಕ್ಷೇತ್ರ ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರ. ಈ ಕ್ಷೇತ್ರದ ಅಭಿವೃದ್ದಿಗೆ ಅಧಿಕ ಪ್ರಮಾಣದ ಅನುದಾನಗಳು ಬೇಕಾಗುತ್ತದೆ. ಅದನ್ನು ಶಾಸಕ ಗೋಪಾಲ ಪೂಜಾರಿ ಸೂಕ್ತವಾಗಿ ಮಾಡಿದ್ದಾರೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಗೋಪಾಲ ಪೂಜಾರಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಭಿವೃದ್ಧಿಗೆ ಭಾರಿ ಕೊಡುಗೆ ನೀಡಿದೆ. ಈ ಬಾರಿ ಎಲ್ಲಾ ಕಾರ್ಯಕರ್ತರು ಚುರುಕುಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪುನಃ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಗೋಪಾಲ ಪೂಜಾರಿ ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆ ನೀಡಿ ಬಿಜೆಪಿ ಅಧಿಕಾರಕ್ಕ ಏರಿದೆ. ನೀಡಿದ ಯಾವುದೇ ಭರವಸೆಗಳನ್ನು ಸರಿಯಾಗಿ ಬಿಜೆಪಿ ಸರ್ಕಾರ ಅನುಷ್ಟಾನಕ್ಕೆ ತಂದಿಲ್ಲ. ಕಾಳಧನವನ್ನು ಮೋದಿ ಯಾಕೆ ಇನ್ನೂ ವಾಪಸ್ ತಂದಿಲ್ಲ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಬ್ಲೋಸಮ್ ಫೆರ್ನಾಂಡಿಸ್, ರಾಜೂ ಪೂಜಾರಿ, ಆಲೂರು ಮಂಜಯ್ಯ ಶೆಟ್ಟಿ, ಗೌರಿ ದೇವಾಡಿಗ, ಜ್ಯೋತಿ ಎಂ, ವಾಸುದೇವ ಯಡಿಯಾಳ್ ಉಪಸ್ಥಿತರಿದ್ದರು.