ಮಂಗಳೂರು, ಮೇ 14 : ರಾಜ್ಯದ ಕರಾವಳಿ ತೀರದ ರಕ್ಷಣೆಗಾಗಿ ಭಾರತೀಯ ತಟ ರಕ್ಷಣಾ ಪಡೆಗೆ ನಿಯೋಜನೆಗೊಂಡಿರುವ ವಿಕ್ರಮ್ ಕಣ್ಗಾವಲು ಹಡಗು ಭಾನುವಾರ ನವ ಮಂಗಳೂರು ಬಂದರಿಗೆ ಆಗಮಿಸಿತು. ಈ ಹಿನ್ನಲೆಯಲ್ಲಿ ಕೋಸ್ಟ್ ಗಾರ್ಡ್ ನ ಕರ್ನಾಟಕ ಕೇಂದ್ರಿಯ ವಿಭಾಗದ ವತಿಯಿಂದ ಸ್ವಾಗತಿಸಲಾಯಿತು. ಇದೇ ವೇಳೆ ಮಾತನಾಡಿದ ಆದಾಯ ಇಲಾಖೆಯ ಆಯುಕ್ತ ನರೋತ್ತಮ್ ಮಿಶ್ರ ಐಆರ್ ಎಸ್ ಮಾತನಾಡಿ, ಹಡಗು ನಿರ್ಮಾಣದಲ್ಲಿ ಭಾರತವೂ ಇದೀಗ ತನ್ನದೇ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾಗುತ್ತಿದ್ದು ತನ್ನ ಬಲವನ್ನು ವೃದ್ದಿಸಿಕೊಳ್ಳುತ್ತಿದೆ ಎಂದರು. ಇದೇ ವೇಳೆ ಕೋಸ್ಟ್ ಗಾರ್ಡ್ ಕಮಾಂಡರ್, ಸತ್ವಂತ್ ಸಿಂಗ್ ಕಣ್ಗಾವಲು ನೌಕೆಯ ವಿಶೇಷತೆಯನ್ನು ವಿವರಿಸಿದರು.
ವಿಕ್ರಮ್ ನ ವಿಶೇಷತೆ
ಕೋಸ್ಟ್ ಗಾರ್ಡ್ ಗೆ ಸೇರ್ಪಡೆಗೊಂಡಿರುವ ವಿಕ್ರಮ್ ನೌಕ ದಾಳಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ.98 ಮೀಟರ್ ಉದ್ದ, 15 ಮೀಟರ್ ಅಗಲ, 2100 ಟನ್ ತೂಕವಿದೆ. ಇನ್ನು ವಿಕ್ರಮ್ ಗಂಟೆಗೆ 24ನಾಟಿಕಲ್ ಮೈಲು ದೂರ ಸಂಚರಿಸಬಲ್ಲ ಈ ನೌಕೆ ಎರಡು ಇಂಜಿನ್ ಗಳ ಒಂದು ಹೆಲಿಕ್ಯಾಪ್ಟರ್ ಗಳನ್ನು ಹೊತ್ತೊಯ್ಯಬಲ್ಲದು. ಅಲ್ಲದೆ ಎರಡು ಅತ್ಯಾಧುನಿಕ ಸ್ಪೀಡ್ ಬೋಟ್ ಹೊಂದಿದೆ. ನೀರನ್ನು ಶುದ್ದೀಕರಿಸುವ ತಂತ್ರಜ್ಞಾನವೂ ಇದರಲ್ಲಿ ಒಳಗೊಂಡಿದೆ. 14 ಅಧಿಕಾರಿಗಳು, 88 ಸಿಬ್ಬಂಧಿಗಳು ಇದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ