ಮಂಗಳೂರು,ಮೇ13: ಸಾಮಾಜಿಕ ಜಾಲ ತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ದ್ವೇಷ ಹುಟ್ಟಲು ಕಾರಣರಾಗಿರುವ ಸಾಮಾಜಿಕ ಕಾರ್ಯಕರ್ತರೊಬ್ಬರ ವಿರುದ್ಧ ಇದೀಗ ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ರೋಬರ್ಟ್ ರೊಜಾರಿಯೋ ಎಂದು ಹೆಸರಿಸಲಾಗಿದೆ. ಇವರು ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಕೆಟ್ಟ ಸಂದೇಶ ಪ್ರಕಟಿಸಿ ಸಮಾಜದಲ್ಲಿ ದ್ವೇಷ ಹುಟ್ಟುವಂತೆ ಮಾಡಲು ಯತ್ನಿಸಿದ್ದಾರೆ ಎಂದು ದೂರಿ ಕದ್ರಿಗೆ ಅತ್ತಾವರದ ದೀಪಕ್ ಡಿ ಸೋಜಾ ಎಂಬವರು ದೂರು ಸಲ್ಲಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಪ್ರಕಾರ ವಿಕೃತ ಸಂಗತಿಗಳನ್ನು ಪ್ರಕಟಿಸಿ ಮತದಾರರಲ್ಲಿ ಗೊಂದಲ ಮೂಡಿಸುವುದಾಗಲೀ ಮತ್ತು ವಿವಿಧ ಸಮುದಾಯಗಳ ಮಧ್ಯೆ ದ್ವೇಷ ಹುಟ್ಟುವಂತೆ ಮಾಡುವುದಾಗಲೀ ತಪ್ಪು. ರೋಬರ್ಟ್ ರೊಜಾರಿಯೋ ಅವರು 2008ರ ಚರ್ಚ್ ದಾಳಿಯ ಘಟನೆಗಳನ್ನು ಉಲ್ಲೇಖಿಸಿ ಕೆಥೋಲಿಕ್ ಕ್ರೈಸ್ತರ ಮಧ್ಯೆ ಮತ್ತು ಇತರ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸಲು ಯತ್ನಿಸಿದ್ದಾರೆ. ಅವರು ತಯಾರಿಸಿದ ವಿಡಿಯೋ ಕೋಮು ಸಾಮರಸ್ಯ ಕೆಡಿಸಲು ಕಾರಣವಾಗಿದೆ ಎಂದು ದೀಪಕ್ ಡಿ ಸೋಜಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
2008ರಲ್ಲಿ ನಡೆದ ಚರ್ಚ್ ದಾಳಿ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟಲು ಕೆಥೋಲಿಕ್ ಕ್ರೈಸ್ತ ಸಮುದಾಯವೇ ಕಾರಣವೆಂದು ರೋಬರ್ಟ್ ಅವರು ಆರೋಪಿಸಿದ್ದಾರೆ. ಕೆಥೋಲಿಕರು ಕಾಂಗ್ರೆಸ್ ಬೆಂಬಲಿಸಲು ಯೋಜನೆ ಹಾಕಿಕೊಂಡಿದ್ದಾರೆಂಬ ಆರೋಪವನ್ನೂ ಅವರು ಮಾಡಿದ್ದಾರೆ.