ಮಂಗಳೂರು,ಮೇ13: 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನವು ಮುಕ್ತ , ನ್ಯಾಯಸಮ್ಮತ, ಶಾಂತಿಯುತವಾಗಿ ನಡೆದಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯಾವುದೇ ಅಹಿತಕರ ಘಟನೆಗೆ ಬಲಿಯಾಗದೇ ಮತದಾನ ಮುಕ್ತಾಯಗೊಂಡಿದೆ. ಮತದಾರರು ಬಹಳ ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 17,11,848 ಮಂದಿ ಮತ ಚಲಾಯಿಸುವ ಅರ್ಹತೆ ಪಡೆದಿದ್ದರು. ಜಿಲ್ಲೆಯ ಎಲ್ಲಾ ಹಾಲಿ ಶಾಸಕರು ಮತ್ತೆ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಕಣದಲ್ಲಿವೆ. ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಎಂಇಪಿ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸಿಪಿಎಂ ನಾಲ್ಕು ಕ್ಷೇತ್ರಗಳಲ್ಲಿ, ಜೆಡಿಎಸ್ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಿಂದೂ ಮಹಾಸಭಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, 17 ಮಂದಿ ಪಕ್ಷೇತರರು ಚುನಾವಣಾ ಕಣದಲ್ಲಿದ್ದರು. ಮಂಗಳೂರು ನಗರ ದಕ್ಷಿಣ ಮತ್ತು ಪುತ್ತೂರು ಕ್ಷೇತ್ರಗಳಲ್ಲಿ ಅತ್ಯಧಿಕ ತಲಾ 11 ಅಭ್ಯರ್ಥಿಗಳಿದ್ದಾರೆ. ಮೂಡುಬಿದಿರೆ ಮತ್ತು ಮಂಗಳೂರು ನಗರ ಉತ್ತರದಲ್ಲಿ ತಲಾ ಏಳು, ಬೆಳ್ತಂಗಡಿ ಮತ್ತು ಸುಳ್ಯ ಕ್ಷೇತ್ರಗಳಲ್ಲಿ ತಲಾ ಆರು ಹಾಗೂ ಮಂಗಳೂರು ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ತಲಾ ಐವರು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇನ್ನು ಜಿಲ್ಲೆಯ 1,858 ಮತಗಟ್ಟೆಗಳಲ್ಲಿ ಶಾಂತಿಯುತ ಮತ್ತು ಸುಗಮ ಮತದಾನ ಪ್ರಕ್ರಿಯೆ ನಡೆಸುವುದಕ್ಕಾಗಿ 13,176 ಮತಗಟ್ಟೆ ಸಿಬ್ಬಂದಿ ಹಾಗೂ ಏಳು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 77.63% ಮತದಾನವಾಯಿತು. ಅದರಲ್ಲಿ ಬೆಳ್ತಂಗಡಿಯಲ್ಲಿ 81.40 % ಮತದಾನ, ಮೂಡಬಿದ್ರೆಯಲ್ಲಿ 75.4೧% , ಮಂಗಳೂರು ನಗರ ಉತ್ತರ 74.55 % ಮತದಾನ, ಮಂಗಳೂರು ನಗರ ದಕ್ಷಿಣ 67.47 % , ಮಂಗಳೂರು ಉಳ್ಳಾಲದಲ್ಲಿ 75.73 % ಮತದಾನ, ಬಂಟ್ವಾಳದಲ್ಲಿ 81.89 %, ಪುತ್ತೂರಿನಲ್ಲಿ 81.70 % ಹಾಗೂ ಸುಳ್ಯದಲ್ಲಿ 83.00 % ಮತದಾನ ನಡೆಯಿತು.
ಮತದಾನದ ಸಂದರ್ಭ ಕೆಲವೆಡೆ ಮತಯಂತ್ರದಲ್ಲಿ ದೋಷ ಕಂಡು ಬಂದುದರಿಂದ ಸ್ವಲ್ಪಮಟ್ಟಿನ ಗೊಂದಲ ಉಂಟಾಗಿತ್ತು. ಇನ್ನು ಮಂಗಳೂರು, ಬಂಟ್ವಾಳದಲ್ಲಿ ಮಧುಮಗಳಿಬ್ಬರು ವೋಟ್ ಹಾಕಿ ಮತದಾರರ ಗಮನ ಸೆಳೆದಿದ್ದಾರೆ. ಬೆಳ್ತಂಗಡಿಯಲ್ಲಿ ವ್ಯಕ್ತಿಯೊಬ್ಬರು ಮತದಾನ ಮಾಡಲು ಬರುವ ವೇಳೆ ಹೃದಯಾಘಾತದಿಂದ ನಿಧನರಾದರು. ಹೀಗೆ ಕೆಲ ಕಹಿ, ಸಿಹಿಗಳಿಗೆಗೂ ನಿನ್ನೆಯ ದಿನ ಸಾಕ್ಷಿಯಾಯ್ತು. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ತೀರ್ಮಾನವಾಗಲಿದೆ.