ಮಂಗಳೂರು, ಮೇ 12: ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಂಗಳಮುಖಿಯರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ತಮ್ಮ ಹಕ್ಕು ಚಲಾಯಿಸಿದ್ದಾರೆ.
ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮುಂಜಾನೆ ವೇಳೆ ಗುರುತಿನ ಚೀಟಿಯೊಂದಿಗೆ ಸರತಿ ಸಾಲಿನಲ್ಲಿ ನಿಂತು ಮಂಗಳಮುಖಿಯರು ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಮಂಗಳೂರಿನ ಮಿಲಾಗ್ರಿಸ್ ಸಂಸ್ಥೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಮಂಗಳಮುಖಿಯರು ಸಂತೋಷ ಮತ್ತು ಹೊಸ ಹುಮ್ಮಸ್ಸಿನಿಂದ ಮತ ಚಲಾಯಿಸಿದ್ದಾರೆ.
ದ.ಕ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ 100 ಮಂಗಳಮುಖಿಯರು ಮತದಾನಕ್ಕೆ ಅವಕಾಶ ಪಡೆದಿದ್ದು, ಬೆಳ್ತಂಗಡಿ ಕ್ಷೇತ್ರದಲ್ಲಿ 1, ಮೂಡುಬಿದಿರೆಯಲ್ಲಿ 13, ಮಂಗಳೂರು ನಗರ ಉತ್ತರದಲ್ಲಿ 8, ಮಂಗಳೂರು ನಗರ ದಕ್ಷಿಣದಲ್ಲಿ 56, ಮಂಗಳೂರು ಕ್ಷೇತ್ರದಲ್ಲಿ 13, ಬಂಟ್ವಾಳದಲ್ಲಿ 6, ಪುತ್ತೂರಿನಲ್ಲಿ 3 ಮಂಗಳಮುಖಿಯರು ಮತದಾನಕ್ಕೆ ಅರ್ಹರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಸಮಾಜದಲ್ಲಿ ಎಲ್ಲರಂತೆ ತಮಗೂ ಎಲ್ಲ ಹಕ್ಕುಗಳನ್ನೂ ಪಡೆಯಲು ಹೋರಾಟ ನಡೆಸುತ್ತಿದ್ದ ಮಂಗಳಮುಖಿಯರಿಗೆ ಇದೇ ಪ್ರಪ್ರಥಮ ಬಾರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಅದರಂತೆ, ಈ ಬಾರಿ ಮಂಗಳಮುಖಿಯರಿಗೂ ಚುನಾವಣಾ ಆಯೋಗ ಮತದಾನದ ಪರಮೋಚ್ಛ ಅಧಿಕಾರ ನೀಡಿದ್ದು, ಅದನ್ನು ವ್ಯರ್ಥ ಮಾಡದೇ ಮತ ಚಲಾಯಿಸಿದ್ದಾರೆ.