ಸುಳ್ಯ, ಸೆ23: ಪುಷ್ಪಗಿರಿ ತಪ್ಪಲಿನ ಕಲ್ಮಕಾರು ಮತ್ತು ಬಾಳಗೋಡು ಗ್ರಾಮಗಳು ಅರಣ್ಯ ಪಾಲಾಗುವ ಭೀತಿಯನ್ನು ಎದುರಿಸುತ್ತಿದೆ. ಪುಷ್ಪಗಿರಿ ವನ್ಯಜೀವಿ ಇಲಾಖೆಯು ಪರಿಸರ ಸೂಕ್ಷ್ಮವಲಯಕ್ಕೆ ಸುಳ್ಯದ ಎರಡು ಗ್ರಾಮಗಳ ಸೇರ್ಪಡೆ ಮಾಡುವ ಯೋಜನೆಯನ್ನು ಮಾಡಿಕೊಂಡಿದ್ದಾರೆ. ಅಧಿಕಾರಿಗಳ ಈ ಯೋಜನೆಯನ್ನು ಇಲ್ಲಿನ ಗ್ರಾಮಸ್ಥರು ಹಲವಾರು ದಿನಗಳಿಂದ ವಿರೋಧಿಸುತ್ತಲೇ ಬಂದಿದ್ದಾರೆ. ಆದರೂ ಇಲಾಖಾ ಅಧಿಕಾರಿಗಳು ಯೋಜನೆಯನ್ನು ಮುಂದುವರಿಸುವ ಯೋಚನೆಯಲ್ಲಿದ್ದು, ಈ ಗ್ರಾಮಗಳಿಗೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ. ನಿನ್ನೆ ಸಂಜೆಯೂ ಅಧಿಕಾರಿಗಳು ಈ ಗ್ರಾಮಗಳಿಗೆ ಆಗಮಿಸಿದ್ದು, ಇದರಿಂದ ಆಕ್ರೋಶಿತಗೊಂಡಿರುವ ಗ್ರಾಮಸ್ಥರು ಪುಷ್ಪಗಿರಿ ವನ್ಯಜೀವಿ ಇಲಾಖೆಯಿಂದ ಆಗಮಿಸಿದ ಅಧಿಕಾರಿಗಳ ತಂಡಕ್ಕೆ ಸತತ 5 ಗಂಟೆಗಳ ಕಾಲ ದಿಗ್ಭಂದನ ಹಾಕಿದ ಘಟನೆ ನಡೆದಿದೆ.
ಸೋಮವಾರ ಪೇಟೆ ಪುಷ್ಪಗಿರಿ ಇಲಾಖೆಯ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ನೇತೃತ್ವದ 6 ಮಂದಿಯ ತಂಡ ಹರಿಹರ ಮಾರ್ಗವಾಗಿ ಆಗಮಿಸಿದ್ದು, ಈ ವೇಳೆ ದಾರಿ ಮಧ್ಯೆ ಗ್ರಾಮಸ್ಥರು ಅಧಿಕಾರಿಗಳನ್ನು ತಡೆದು ಅತ್ತ ತೆರಳಿದರೆ ಸಮಸ್ಯೆಯಾದಿತು ಎಂದು ಎಚ್ಚರಿಸಿದರು. ಆದರೂ ತಂಡ ವಾಹನದಲ್ಲಿ ಕುಡುಮುಂಡೂರು ಮೂಲಕ ಮಾರಿಗುಂಡಿಗೆ ತೆರಳಲು ಯತ್ನಿಸಿದರು. ವಿಷಯ ತಿಳಿದ 5 ಗ್ರಾಮಗಳ ಜನತೆ ಜಮಾಯಿಸಿ ವಾಹನ ಚಕ್ರದ ಗಾಳಿ ತೆಗೆದು, ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಪೊಲೀಸ್ ಸಿಬಂದಿಗಳು ಮನವಿ ಮಾಡಿದರೂ ಗ್ರಾಮಸ್ಥರು ಸ್ಥಳದಿಂದ ಹಿಂದೆ ಸರಿಯದೆ, ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದರು. ಬಳಿಕ ಎಸ್.ಐ. ಗೋಪಾಲ ಅವರು ಆಗಮಿಸಿ, ಕಾನೂನು ವಿರುದ್ಧ ನಡೆದರೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು. ಈ ವೇಳೆ ಗ್ರಾಮಸ್ಥರು ತಮ್ಮದು ಅಸಹಕಾರ ಮತ್ತು ಅಹಿಂಸಾ ಹೋರಾಟ. ಅರಣ್ಯ ಸಿಬಂದಿಗಳ ದೂರಿನಂತೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ತಾವು ಕೂಡಾ ಅಧಿಕಾರಿಗಳ ವಿರುದ್ಧ ಪ್ರತಿದೂರು ಸಲ್ಲಿಸುವುದಾಗಿ ಪ್ರತಿಕ್ರಿಯಿಸಿದರು.
ಅಂತಿಮವಾಗಿ ರೇಂಜರ್ ಮರಿಸ್ವಾಮಿ ಇನ್ನು ಮುಂದೆ ಇತ್ತ ಆಗಮಿಸುವುದಿಲ್ಲ ಎಂದು ತಿಳಿಸಿದರು. ಹೀಗಾಗಿ ಗ್ರಾಮಸ್ಥರು ದಿಗ್ಭಂದನ ಹಿಂತೆಗೆದುಕೊಂಡರು.