ಬಂಟ್ವಾಳ, ಮೇ 10 : ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇವುಗಳನ್ನು ತಡೆಯುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ, ದ.ಕ.ಜಿಲ್ಲೆಯಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲ ಎಂದು ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆಭಟ್ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಬಿಜೆಪಿ ಪಕ್ಷದ ಚುನಾವಣಾ ಕಛೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆ, ಮಡಿಲು, ಸೈಕಲ್ ವಿತರಣೆ, ಸ್ವಸಹಾಯ ಗುಂಪುಗಳಿಗೆ ಸಹಾಯಧನ ಮೊದಲಾದ ಮಹಿಳಾಪರ ಕಾಳಜಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳಾ ಶೋಷಣೆಗಳು ಹೆಚ್ಚಾಗಿದ್ದು, ಸಾವಿರಕ್ಕೂ ಅಧಿಕ ಕೊಲೆ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ ಇದು ದುರದೃಷ್ಟಕರ ಎಂದರು. ಹಿಂದೂಗಳ ಪರವಾಗಿ ಹೇಳಿಕೆ ನೀಡುವ ಜಿಲ್ಲಾ ಉಸ್ತುವಾರಿ ಸಚಿವರು ಗೋ ಹತ್ಯಾ ನಿಷೇಧ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಿಂದು, ದೇವಸ್ಥಾನ ಎಂಬ ಪದ ಬಳಕೆ ಮಾಡಿಲ್ಲ. ಕೇವಲ ಅಲ್ಪ ಸಂಖ್ಯಾತರನ್ನು ಮಾತ್ರ ಓಲೈಕೆ ಮಾಡುತ್ತಿದ್ದು, ಬಹುಸಂಖ್ಯಾತರ ಮೇಲೆ ಯಾವುದೇ ಯೋಜನೆಯನ್ನು ಜಾರಿಗೊಳಿಸಿಲ್ಲ, ಇಲ್ಲಿನ ಸಚಿವರು ಗೋ ರಕ್ಷಕರನ್ನು ರಕ್ಷಿಸಿಸದೆ ಗೋ ಭಕ್ಷಕರ ರಕ್ಷಣೆಗೆ ನಿಂತಿದೆ ಎಂದು ಟೀಕಿಸಿದ ಸುಲೋಚನಾ ಭಟ್, ರಮಾನಾಥ ರೈ ಅವರಿಗೆ ಹಿಂದುಗಳ ಬಗ್ಗೆ ಕಾಳಜಿಯಿದ್ದರೆ ಗೋ ಹತ್ಯಾ ನಿಷೇಧ ಮಾಡುತ್ತೇನೆ ಎಂದು ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಹಿತ ಸಚಿವರಾದ ತನ್ವೀರ್ ಸೇಠ್, ಮೇಟಿ ಮೊದಲಾದವರ ವಿರುದ್ದ ಲೈಂಗಿಕ ದೌರ್ಜನ್ಯದ ಪ್ರಕರಣಗಳಿದ್ದು, ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ ಎಂದರು. ಕೇಂದ್ರದ ಬಿಜೆಪಿ ಸರ್ಕಾರ ಮಹಿಳೆಯರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬಂಟ್ವಾಳದಲ್ಲಿ ಈ ಬಾರಿ ಬಿಜೆಪಿ ಪರ ಅಲೆ ಇದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಬಹುಮತದಿಂದ ಆಯ್ಕೆಯಾಗುವ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಇದೇ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕೇವಲ ಆರು ಮಂದಿ ಮಹಿಳಾ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿರುವ ಬಗ್ಗೆ ನಮಗೂ ನೋವಿದೆ, ಆದರೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಖಂಡಿತವಾಗಿಯೂ ಹೆಚ್ಚಿನ ಪ್ರಾಶಸ್ತ್ಯ ಸಿಗುವ ವಿಶ್ವಾಸವಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ಮಾಜಿ ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ, ಕ್ಷೇತ್ರ ಬಿಜೆಪಿ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ ಉಪಸ್ಥಿತರಿದ್ದರು.