ಬೆಂಗಳೂರು, ಮೇ 10: ನನ್ನ ತಾಯಿ ಸೋನಿಯಾ ಗಾಂಧಿ ಇಟಾಲಿಯನ್ ಆಗಿದ್ರೂ ಕೂಡ ಭಾರತ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ತಾಯಿ ಸೋನಿಯಾ ಗಾಂಧಿ ಇಟಾಲಿಯನ್. ಅವರು ಭಾರತದಲ್ಲಿ ಬಹಳಷ್ಟು ದಿನ ಕಳೆದಿದ್ದಾರೆ. ಮಾತ್ರವಲ್ಲ ಭಾರತ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ಕನ್ನಡ ಅಸ್ಮಿತೆ ಮೇಲೆ ನಡೆಯುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅತಂತ್ರ ಸ್ಥಿತಿ ಬರಲು ಸಾಧ್ಯವೇ ಇಲ್ಲ. ಬಸವ ತತ್ವ ಕಾಂಗ್ರೆಸ್ ಪಕ್ಷದ ತತ್ವ. ಮಾತ್ರವಲ್ಲ ಬಸವ ತತ್ವವೇ ನಮಗೆ ಸ್ಪಿರಿಟ್. ರಾಜ್ಯದ ಮೇಲೆ ಹಿಡಿತ ಸಾಧಿಸಲು ಆರ್.ಎಸ್.ಎಸ್ ಸಂಘಟನೆ ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರಚಾರದ ವೇಳೆ ಹಲವು ದೇವಸ್ಥಾನ, ಮಸೀದಿ ಹಾಗೂ ಚರ್ಚ್ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಎನ್ನುವ ಪಕ್ಷ ನಮ್ಮದಲ್ಲ. ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಬಿಜೆಪಿ ಪಕ್ಷದವರು ಹತ್ತಿಕುತ್ತಿದ್ದಾರೆ. ಮಾತ್ರವಲ್ಲ, ಆಹಾರ ಸಂಸ್ಕೃತಿಯ ಮೇಲೆ ಆರ್ಎಸ್ಎಸ್ ದಾಳಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಬಸವಣ್ಣನವರ ತತ್ವ ಸಿದ್ದಾಂತದ ಮೇಲೆ ನಂಬಿಕೆ ಇಟ್ಟು ನಡೆಯುತ್ತಿದೆ. ಬಿಜೆಪಿ ಒಂದು ಪ್ಯಾನಿಕ್ ಪಾರ್ಟಿ ಎಂದು ಹೇಳಿದ್ದಾರೆ.