ಮೇ,10: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಪಾರ್ಟ್ಮೆಂಟ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸಾವಿರಾರು ಮತದಾರರ ಗುರುತಿನ ಪತ್ರಗಳು, ಮನವೊಲಿಕೆ ಮತ್ತು ಆಮಿಷಗೊಳಪಡಿಸುವ ಸಲುವಾಗಿಯೇ ವೋಟರ್ ಐಡಿಗಳನ್ನು ಸಂಗ್ರಹಿಸಿ ಇಡಲಾಗಿತ್ತು . ಅಂತೆಯೇ ಇವೆಲ್ಲವೂ ಅಸಲಿ ವೋಟರ್ ಐಡಿ ಎಂದು ಸಾಬೀತಾಗಿದ್ದು ಚುನಾವಣೆ ಮುಂದೂಡುವ ಸಾಧ್ಯತೆ ನಿಚ್ಚಳವಾಗಿದೆ. ಕೇಂದ್ರ ಚುನಾವಣೆ ಆಯೋಗದ ಉಪ ಆಯುಕ್ತರು ದಿಲ್ಲಿಯಿಂದ ಬೆಂಗಳೂರಿಗೆ ದೌಡಾಯಿಸಿದ್ದು, ಯಾವುದೇ ಕ್ಷಣದಲ್ಲಿ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಅಲ್ಲದೆ ಈ ಮಧ್ಯೆ, ಪ್ರಕರಣದ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಅರೋಪ - ಪ್ರತ್ಯಾರೋಪದಲ್ಲಿ ತೊಡಗಿವೆ.
ಈ ನಡುವೆ ಚುನಾವಣೆ ಆಯೋಗವೂ ಪ್ರತಿಕ್ರಿಯೆ ನೀಡಿದ್ದು, ಆರ್ .ಆರ್ ನಗರದಲ್ಲಿ ಪತ್ತೆಯಾದ 9,896 ಎಪಿಕ್ ಕಾರ್ಡ್ಗಳು ಅಸಲಿಯಾಗಿವೆ. ಇವುಗಳನ್ನು ಗಮನಿಸಿದಾಗ ಇದು ಮತದಾರರನ್ನು ಮನವೊಲಿಸುವ, ಆಮಿಷಕ್ಕೊಳಪಡಿಸುವ ಪೂರ್ವ ನಿಯೋಜಿತ ಸುವ್ಯಸ್ಥಿತ ತಂತ್ರ ಎಂದು ಸ್ಪಷ್ಟವಾಗಿ ಗೋಚರಿಸಿದೆ. ಹೀಗಾಗಿ ಕೇಂದ್ರ ಚುನಾವಣೆ ಆಯೋಗಕ್ಕೆ ವರದಿ ಸಲ್ಲಿಸಿದ್ದು, ಅಕ್ರಮ ಗಂಭೀರ ಸ್ವರೂಪದ್ದಾಗಿರುವುದರಿಂದ ಕೇಂದ್ರ ಚುನಾವಣೆ ಆಯೋಗದ ಹಿರಿಯ ಉಪ ಆಯುಕ್ತರು ಬೆಂಗಳೂರಿಗೆ ಬಂದು ಪರಿಶೀಲನೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುತ್ತಾರೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.