ಮಂಗಳೂರು, ಮೇ 10: ಸಂಘವೇ ನನ್ನ ಕುಟುಂಬ ಎಂಬ ನಂಬಿಕೆಯಲ್ಲಿ ದುಡಿಯುತ್ತಿದ್ದ ನನಗೆ ಯಾಕೆ ಟಿಕೆಟ್ ಸಿಕ್ಕಿಲ್ಲ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಹೇಳುತ್ತಾ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವಕ್ಕಾಗಿ ಇಡೀ ಜೀವನ ಮುಡಿಪಾಗಿಟ್ಟ ನನ್ನ ತೇಜೋವಧೆ ಮಾಡುವ ಪ್ರಯತ್ನವನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಾಡುತ್ತಿವೆ. ಹನ್ನೊಂದನೆಯ ವಯಸ್ಸಿನಲ್ಲಿ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದೆ. ಅಂದಿನಿಂದ ಇಂದಿನವರೆಗೂ ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಸಂಘವೇ ನನ್ನ ಕುಟುಂಬ ಎಂಬ ನಂಬಿಕೆಯಲ್ಲಿ ದುಡಿಯುತ್ತಿದ್ದೇನೆ. ಈಗ ನನ್ನ ವಿರುದ್ಧ ಹಣ ಮಾಡಿರುವ ಆರೋಪ ಮಾಡಲಾಗುತ್ತಿದೆ ಎಂದು ಕಣ್ಣೀರು ಸುರಿಸಿದ್ದಾರೆ.
ಸಂಘವೇ ನನ್ನ ಕುಟುಂಬ ಎಂಬ ನಂಬಿಕೆಯಲ್ಲಿ ದುಡಿದಿದ್ದೇನೆ. ಮಾತ್ರವಲ್ಲ, ಸಂಘದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಸಂಘಟನೆ ಕೆಲಸಕ್ಕಾಗಿ ಯಾರ ಬಳಿಯೂ ಹಣ ಪಡೆದಿಲ್ಲ. ಸ್ವಂತ ಹಣ ವ್ಯಯ ಮಾಡಿದೆ. ಸಾಲ ಮಾಡಿ ಕಟ್ಟಿದ ಮನೆ ಮತ್ತು ಐದೂವರೆ ಸೆಂಟ್ಸ್ ಜಮೀನು ಬಿಟ್ಟರೆ 85 ಲಕ್ಷ ಸಾಲವೇ ಕುಟುಂಬದ ಆಸ್ತಿ. ತಂದೆ, ತಾಯಿಗೆ ಸುಖ ನೀಡಲಿಲ್ಲ. ಹೆಂಡತಿ, ಮಕ್ಕಳಿಗೆ ನ್ಯಾಯ ಒದಗಿಸಲಿಲ್ಲ ಎಂದು ಹೇಳಿದ್ದಾರೆ.
ಎಂಆರ್ಪಿಎಲ್, ಎಸ್ಇಜೆಡ್ ಸೇರಿದಂತೆ ಕೆಲವು ಕಡೆ ಕಮಿಷನ್ ಪಡೆದಿರುವುದಾಗಿ ಆರೋಪ ಮಾಡಿದ್ದಾರೆ. ಎಂಆರ್ಪಿಎಲ್, ಎಸ್ಇಜೆಡ್ ವಿರುದ್ಧದ ಹೋರಾಟಕ್ಕೆ ನನ್ನ ಸ್ವಂತ ಹಣ ಬಳಸಿದ್ದೇನೆ. ಸುರತ್ಕಲ್ ಟೋಲ್ ವಿಚಾರದಲ್ಲೂ ಹಣ ಪಡೆದಿರುವ ಆರೋಪ ಮಾಡುತ್ತಿದ್ದಾರೆ. ಸಂಘಟನೆಯ ಕೆಲಸಕ್ಕೂ ಬಳಸಿರುವುದು ಸ್ವಂತ ಕೇಬಲ್ ಉದ್ದಿಮೆಯ ಹಣವನ್ನು. ಆದರೆ ನನ್ನ ವಿರುದ್ಧವೇ ಹಣ ಪಡೆದಿರುವ ಆರೋಪ ಮಾಡಲಾಗುತ್ತಿದೆ. ಅಂತಹವರು ಯಾವುದೇ ಸ್ಥಳಕ್ಕೆ ಬಂದರೂ ಪ್ರಮಾಣ ಮಾಡಲು ಸಿದ್ಧ ಎಂದು ಸವಾಲು ಹಾಕಿದರು.
ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಟಿಕೆಟ್ ನೀಡಿಲ್ಲ ಎಂಬುದು ನನಗೆ ಇನ್ನೂ ತಿಳಿದಿಲ್ಲ. 1992 ರಲ್ಲಿ ರಾಜಕೀಯ ಪ್ರವೇಶದ ಅವಕಾಶವಿತ್ತು. ಈ ಬಾರಿಯೂ ಟಿಕೆಟ್ ಕೈ ತಪ್ಪಿದೆ. ಈ ಚುನಾವಣೆಯಲ್ಲಿ ತಮ್ಮದು ತಟಸ್ಥ ನಿಲುವು. ಮೇ 20ರ ಬಳಿಕ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.