ಮಂಗಳೂರು, ಮೇ 09: ಒಂದೆಡೆ ವಿಧಾನಸಭಾ ಚುನಾವಣೆಯ ಕದನ ರಂಗೇರುತ್ತಿದ್ದರೆ, ಇನ್ನೊಂದೆಡೆ ಮತದಾನದ ಜಾಗೃತಿ ಕೂಡ ಆರಂಭವಾಗಿದೆ.
ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 12ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶವನ್ನು ನೀಡಲಾಗುತ್ತಿದೆ.
ಜನರಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಎಂಎಫ್ ಕೂಡ ಮುಂದಾಗಿದೆ. ನಂದಿನಿ ಹಾಲಿನ ಪ್ಯಾಕೆಟ್, ಬಸ್ ಟಿಕೆಟ್ ಮೇಲೆ ಮೇ 12ರಂದು ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶವನ್ನು ಮುದ್ರಿಸಲಾಗಿದ್ದು, ಜನರಲ್ಲಿ ಮತದಾನದ ಜಾಗೃತಿ ಮೂಡಿಸಲಾಗಿದೆ.
ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ನೀಡುವ ಟಿಕೆಟ್ನಲ್ಲೂ ಕೂಡ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಮುದ್ರಿಸಲಾಗಿದ್ದು, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳ ಒಳ ಭಾಗದಲ್ಲಿ ಸ್ಥಳ ಸೂಚಿಸುವ ಡಿಜಿಟಲ್ ಡಿಸ್ಪ್ಲೇನಲ್ಲೂ ಕೂಡ ಮತದಾನದ ಅರಿವು ಮೂಡಿಸುವ ಸಂದೇಶವನ್ನು ನೀಡಲಾಗುತ್ತಿದೆ.
ಸಂವಿಧಾನ 18 ವರ್ಷ ತುಂಬಿದ ಎಲ್ಲರಿಗೂ ಮತ ಚಲಾಯಿಸುವ ಹಕ್ಕು ನೀಡಿದ್ದು, ಪ್ರತಿಯೊಬ್ಬ ಮತದಾರನೂ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಮಾತ್ರವಲ್ಲ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ.