ಮಂಗಳೂರು ಸೆ. 16 (DaijiworldNews/SM): ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಶಾಲಾ ಕಾಲೇಜು ಆವರಣಗಳಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ. ಮಾರಾಟ ಮಾಡುವ ಪ್ರಕರಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಹೇಳಿದರು.
ಅವರು ಮಂಗಳವಾರ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ಕೋಟ್ಪಾ-2003 ಕಾಯ್ದೆಯ ಅನುಷ್ಠಾನ ಮತ್ತು ತಂಬಾಕು ಮಾರಾಟಗಾರಿಗೆ ಪ್ರತ್ಯೇಕ ವ್ಯಾಪಾರ ಪರವಾನಗಿ ಅವಕಾಶ ಮತ್ತು ಪ್ರಯೋಜನಗಳು ಎಂಬ ವಿಷಯದ ಕುರಿತು ವರ್ಚುವಲ್ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
ಈಗಾಗಲೇ ಪಾಲಿಕೆ ವ್ಯಾಪ್ತಿಯ ಪ್ರತೀ ವಾರ್ಡ್ನಲ್ಲಿ ತಂಬಾಕು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲಾ ಕಾಲೇಜಗಳಿಂದ 100 ಮೀಟರ್ ಅಂತರದಲ್ಲಿ ತಂಬಾಕು, ಗುಟ್ಕಾ ಮಾರಾಟ ಮಾಡುವುದು ಹಾಗೂ ಸೇವನೆ ಮಾಡುವುದನ್ನು ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಂಡು ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದರು.
ದೆಹಲಿಯ ತಂಬಾಕು ನಿಯಂತ್ರಣದ ಸೀನಿಯರ್ ಟೆಕ್ನಿಕಲ್ ಅಡ್ವೈಸರ್ ಡಾ. ಶ್ರೀನಿಧಿ ಮಾತನಾಡಿ, ಮಹಾನಗರ ಪಾಲಿಕೆಗಳು ವ್ಯಾಪಾರದ ಪರವಾನಗಿ ನೀಡುವಾಗ ಕೋಟ್ಪಾ ಕಾಯ್ದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಕಾನೂನು ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವುದು ಕಂಡುಬಂದರೆ ಅಧಿಕಾರಿಗಳು ತಕ್ಷಣ ನಿಗಧಿತ ದಂಡ ವಿಧಿಸಬೇಕು. ನಿಯಮ ಉಲ್ಲಂಘಿಸಿ ತಂಬಾಕು ಮಾರಾಟ ಮಾಡುವುದು ಕಂಡುಬಂದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದುಗೊಳಿಸಬೇಕು ಎಂದರು.