ಮಂಗಳೂರು, ಸೆ 16 (DaijiworldNews/PY): ಏಕಕಾಲದಲ್ಲಿ ಎರಡು ಕೈಗಳಿಂದ ಕೇವಲ ಒಂದು ನಿಮಿಷದಲ್ಲಿ 45 ಪದಗಳನ್ನು ಬರೆದ ಬಹು-ಪ್ರತಿಭಾನ್ವಿತ ಆದಿ ಸ್ವರೂಪಾ ವಿಶ್ವ ದಾಖಲೆ ಬರೆದಿದ್ದಾರೆ.
ಎರಡು ಕೈಗಳಲ್ಲಿ ಏಕಕಾಲದಲ್ಲಿ ಯುನಿಡೈರಕ್ಷನಲ್ ಶೈಲಿಯಲ್ಲಿ 45 ಇಂಗ್ಲಿಷ್ ಪದಗಳನ್ನು ಬರೆದಿದ್ದು, ಈಕೆಗೆ ಉತ್ತರ ಪ್ರದೇಶದ ರಾಯ್ ಬರೇಲಿಯ ಲಾಟಾ ಫೌಂಡೇಶನ್ ಸಂಸ್ಥೆ ವಿಶೇಷ ವಿಶ್ವ ದಾಖಲೆ ಘೋಷಿಸಿದೆ.
ಯಾವತ್ತೂ ಶಾಲೆಗೆ ಹೋಗದ ಆದಿ ಸ್ವರೂಪಾ, ಆಕೆಯ ಪೋಷಕರಾದ ಗೋಪಾಡ್ಕರ್ ಮತ್ತು ಸುಮಾಡ್ಕರ್ ಅವರು ನಡೆಸುತ್ತಿರುವ ಸ್ವರೂಪಾ ಅಧ್ಯಯನ ಕೇಂದ್ರದಲ್ಲಿ ಈ ಎರಡೂ ಕೈಗಳಿಂದ ಸರಾಗವಾಗಿ ಬರೆಯಲು ಪ್ರಾರಂಭಿಸಿದ್ದಾರೆ. ಆದರೆ ಇತರ ವಿದ್ಯಾರ್ಥಿಗಳಿಗೆ ತಮ್ಮ ಎಡಗೈ ಬಳಸಿ ಬರೆಯಲು ಕಲಿಸಿದರು. ಎರಡು ವರ್ಷಗಳಲ್ಲಿ, ಈಕೆ 10 ವಿಭಿನ್ನ ಶೈಲಿಗಳಲ್ಲಿ ಏಕಕಾಲದಲ್ಲಿ ಎರಡೂ ಕೈಗಳಿಂದ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಸ್ವರೂಪಾ, ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್ಬಾಕ್ಸ್ ಸೇರಿದಂತೆ ರೂಬಿಕ್ಸ್ ಕ್ಯೂಬ್ ಕಲೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಎರಡೂವರೆ ವರ್ಷ ವಯಸ್ಸಿನಲ್ಲೇ, ಸ್ವರೂಪಾ ತನ್ನ ಪೋಷಕರೊಂದಿಗೆ ಸ್ವರೂಪಾ ಸಂಘಟನೆಯ ಜೊತೆ ಶಿಕ್ಷಣ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು. 2019ರವರೆಗೆ, ಸ್ವರೂಪ 1,600 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ತನ್ನ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದಲ್ಲದೆ, ಆಕೆ ಮಿಮಿಕ್ರಿ ಮತ್ತು ಬೀಟ್ಬಾಕ್ಸ್ ಕಲೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.
ಸ್ವರೂಪಾ ಒಂದೂವರೆ ವರ್ಷ ವಯಸ್ಸಿನಲ್ಲಿ ಓದಲು ಪ್ರಾರಂಭಿಸಿದ್ದು, ಎರಡೂವರೆ ವರ್ಷ ವಯಸ್ಸಿನಲ್ಲಿ ಸುಮಾರು 30 ಪುಟಗಳನ್ನು ಬರೆಯುತ್ತಿದ್ದರು. ಈಗ ಆದಿ ಸ್ವರೂಪಾ ಶಾಲೆಗೆ ಹೋಗದೆ, ಎರಡೂ ಕೈಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆಯಲು ಸಿದ್ಧವಾಗಿದ್ದಾಳೆ.
ಸಂಗೀತದಲ್ಲಿ ಆಸಕ್ತಿ ಹೊಂದಿರುವ ಸ್ವರೂಪಾ ಅವರು ಪಂಡಿತ್ ರವಿಕಿರಣ್ ಮಣಿಪಾಲ್ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದಾರೆ. ಅಲ್ಲದೇ, ಗಿಟಾರ್ ಮತ್ತು ಕೀಬೋರ್ಡ್ ಕಲಿಯುತ್ತಿದ್ದಾಳೆ. ತನ್ನ ಪಠ್ಯಕ್ರಮದ ಪಾಠಗಳು ಮತ್ತು ಕವನಗಳಿಗೆ ಸಂಗೀತವನ್ನು ಸಂಯೋಜಿಸುತ್ತಾ, ಹಾಡುತ್ತಾಳೆ. ಅಲ್ಲದೇ, ಆಕೆಯ ಪಾಠಗಳ ಸಂಗೀತದ ಸಿ.ಡಿಗಳು ಸಹ ಬಿಡುಗಡೆಯಾಗಿವೆ.
ಆದಿ ಸ್ವರೂಪಾ ಏಳು ವರ್ಷಗಳಿಂದ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ಇಂಗ್ಲೀಷ್ ಹಾಗೂ ಕನ್ನಡವನ್ನು ಹೆಚ್ಚಾಗಿ ಓದುವ ಈಕೆ ಈಗಾಗಲೇ 120ಕ್ಕೂ ಹೆಚ್ಚು ಕಾದಂಬರಿಗಳನ್ನು ಓದಿದ್ದಾರೆ. ಎರಡು ಭಾಷೆಗಳಲ್ಲಿ ಪಾಠ ಮತ್ತು ಕವನಗಳನ್ನು ಬರೆಯುವ ಆದಿ, ತನ್ನ 10 ನೇ ಹುಟ್ಟುಹಬ್ಬದಂದು ಆದಿಯಾ ಕಥೆ, ಅಂತ್ಯ ನೀವೇ ಹೇಳಿ ಎನ್ನುವಂತ 40 ಕಥೆಗಳ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದಿ ತನ್ನ ಕಥೆಗಳ ಸಂಕಲನಕ್ಕಾಗಿ ರಚಿಸಿದ 40 ವರ್ಣಚಿತ್ರಗಳ ಕಲಾ ಪ್ರದರ್ಶನ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆದಿದೆ.
ಸ್ವರೂಪಾ ಈಗ ಇಂಗ್ಲಿಷ್ನಲ್ಲಿ ಫ್ಯಾಂಟಸಿ ಕಾದಂಬರಿ ಬರೆಯುತ್ತಿದ್ದಾರೆ. ಅಲ್ಲದೇ, ಈಕೆಗೆ ಉತ್ತಮ ನೆನಪಿನ ಶಕ್ತಿ ಇದ್ದು, ಹಲವಾರು ಮೊಬೈಲ್ ಸಂಖ್ಯೆಗಳನ್ನು ನೆನಪಿನಲ್ಲಿಟ್ಟಿಕೊಳ್ಳುತ್ತಾಳೆ. ಅಲ್ಲದೇ ಆಕೆ 45 ಸೆಕೆಂಡುಗಳಲ್ಲಿ ರೂಬಿಕ್ ಕ್ಯೂಬ್ ಪಝಲ್ಗಳನ್ನು ಬಿಡಿಸುತ್ತಾಳೆ.