ಮಂಗಳೂರು, ಸೆ23: ತಿಂಗಳು ಎರಡು ಉರುಳಿದರೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾವು ನಿಗೂಢವಾಗಿಯೇ ಉಳಿದಿದೆ. ಕಾವ್ಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಾವು ಯಾವ ರೀತಿ ಸಂಭವಿಸಿದೆ ಎನ್ನುವ ಬಗ್ಗೆ ಪೊಲೀಸರೂ ಇನ್ನೂ ಕೂಡ ಸ್ಪಷ್ಟಪಡಿಸಿಲ್ಲ. ಹೀಗಾಗಿ ಈ ಪ್ರಕರಣವನ್ನು ಕೂಡಲೇ ಸಿಒಡಿಗೆ ಒಪ್ಪಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಸ್ಟೀಸ್ ಫಾರ್ ಕಾವ್ಯಾ ಹೋರಾಟ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಹೋರಾಟ ಸಮಿತಿ ಅಧ್ಯಕ್ಷ ದಿನಕರ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಅದೆಷ್ಟೋ ಪ್ರಕರಣದಲ್ಲಿ ಶಂಕಿತ ಆರೋಪಿಗಳನ್ನು ಬಂಧಿಸಿ ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿ ಆರೋಪಿ ಸ್ಥಾನದಲ್ಲಿರುವ ಪ್ರವೀಣ್ ಎಂಬಾತನನ್ನು ನೊಟೀಸ್ ನೀಡಿ ಗೌರವದಿಂದ ವಿಚಾರಣೆಗೆ ಕರೆಸಿಕೊಂಡಿದ್ದಾರೆ. ಆಪಾದಿತ ವ್ಯಕ್ತಿಯನ್ನು ಈ ರೀತಿ ಗೌರವದಿಂದ ಕರೆಸಿಕೊಂಡು ನೊಟೀಸ್ ಕೊಟ್ಟರೆ ಅವರು ಯಾವ ರೀತಿಯಲ್ಲಿ ತನಿಖೆ ಮಾಡಬಹುದು ಎನ್ನುವುದನ್ನು ಎಲ್ಲರೂ ಗಮನಿಸಬೇಕು ಎಂದರು.
ಸೆಪ್ಟೆಂಬರ್ 16ರಂದು ಮಂಗಳೂರು ಬಂದ್ಗೆ ನಿರ್ಧರಿಸಿದ್ದೆವು. ಆದರೆ ಪೊಲೀಸ್ ಇಲಾಖೆ ಈ ಬಂದ್ ಮಾಡಬಾರದು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಬಂದ್ ಮಾಡುವುದಿಲ್ಲ ಎಂದು ಅವರ ಜೊತೆಗೆ ನಾವು ಸ್ಪಂದಿಸಿದ್ದೇವೆ. ಆದರೂ ಇನ್ನೂ ಕೂಡಾ ತನಿಖೆ ವರದಿ ನಮಗೆ ಸಿಕ್ಕಿಲ್ಲ. ವಿಚಾರಣೆ ಬಗ್ಗೆ ನಮಗೆ ಅಸಮಾಧಾನ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ಮುಖಂಡರು ಅರೆಬೆತ್ತಲೆ ಪ್ರತಿಭಟನೆ ನಡೆಸಲು ಅನುಮತಿ ಪಡೆದುಕೊಂಡಿಲ್ಲ ಎನ್ನುವ ನೆಪದಲ್ಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದ ಪ್ರಸಂಗವೂ ನಡೆಯಿತು.