ಬೆಂಗಳೂರು, ಮೇ 09: ಚುನಾವಣೆಗೆ ಇನ್ನೆರಡು ದಿನ ಬಾಕಿ ಉಳಿದಿರುವಂತೆ, ಅತ್ತ ಕಡೆ ಅಕ್ರಮವಾಗಿ ಸಂಗ್ರಹಿಸಿಟ್ಟ ಸುಮಾರು 10 ಸಾವಿರಕ್ಕೂ ಅಧಿಕ ಚುನಾವಣಾ ಗುರುತಿನ ಚೀಟಿ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಹೀಗಾಗಿ ಬೆಂಗಳೂರು ನಗರದ ಪ್ರತಿಷ್ಠಿತ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್ಮೆಂಟ್ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ 10 ಸಾವಿರಕ್ಕೂ ಅಧಿಕ ಚುನಾವಣಾ ಗುರುತಿನ ಚೀಟಿ ಪತ್ತೆಯಾಗಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಸ್ಥಳೀಯ ಅಭ್ಯರ್ಥಿ ಮುನಿರತ್ನ ಅವರ ಭಾವಚಿತ್ರವೂ ಪತ್ತೆಯಾಗಿದೆ ಎಂದು ಚುನಾವಣಾ ಅಧಿಕಾರಿ ಸಂಜೀವ್ಕುಮಾರ್ ಹೇಳಿದ್ದಾರೆ.
ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಜಾಲಹಳ್ಳಿಯ ಎಸ್ಎಲ್ವಿ ಪಾರ್ಕ್ವ್ಯೂ ಅಪಾರ್ಟ್ ಮೆಂಟ್ಸ್ ಚುನಾವಣಾ ವಿಚಕ್ಷಣಾ ದಳ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿದಾಗ ಮಾಹಿತಿ ಬಹಿರಂಗವಾಗಿದೆ. ಪ್ಲ್ಯಾಟ್ ನಿಂದ ಐದು ಲ್ಯಾಪ್ ಟಾಪ್, ಒಂದು ಪ್ರಿಂಟರ್, ಎರಡು ಟ್ರಂಕ್ ನಲ್ಲಿ ತುಂಬಿರುವ ಮತದಾರ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಮನೆಯೂ ಮಂಜುಳಾ ನಂಜಾಮರಿ ಎಂಬುವರಿಗೆ ಸೇರಿದದ್ದಾಗಿದ್ದು ಇದನ್ನು ರಾಕೇಶ್ ಎಂಬುವರು ಬಾಡಿಗೆಗೆ ಪಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿ, ಸಾವಿರಾರು ಗುರುತಿನ ಚೀಟಿಗಳು ಪತ್ತೆಯಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದು ,ಇದರಲ್ಲಿ ಕಾಂಗ್ರೆಸಿಗರ ಕೈವಾಡವಿರುವುದಾಗಿ ಆರೋಪಿಸಿದ್ದು, ಚುನಾವಣೆ ಮುಂದೂಡುವಂತೆ ಆಗ್ರಹಿಸಿದ್ದಾರೆ.
ಈ ಮದ್ಯೆ ತುರ್ತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆಯಾದ ಪ್ರಕರಣ ಸಂಬಂಧ ಪೊಲೀಸ್ ತನಿಖೆಗೆ ಆದೇಶ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಚುನಾವಣಾಧಿಕಾರಿ ಮಹೇಶ್ವರರಾವ್ ತನಿಖೆ ನಡೆಸಿದ್ದಾರೆ. ಆಯೋಗ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ