ಬೈಂದೂರು, ಮೇ 09: ಚುನಾವಣಾ ಆಯೋಗ ನೇಮಿಸಿದ್ದ ವೀಡಿಯೋ ಕ್ಯಾಮೆರಾಮ್ಯಾನ್ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ. ಉಡುಪಿಯ ಬೈಂದೂರಿನಲ್ಲಿ ಮೇ, 08 ರ ಮಂಗಳವಾರ ನಡೆದ ಬಿಜೆಪಿ ಸಮಾವೇಶದ ವೇಳೆ ಈ ಘಟನೆ ನಡೆದಿದ್ದು, ಹಲ್ಲೆಗೀಡಾದ ಕ್ಯಾಮೆರಾಮ್ಯಾನ್ ಕೈಗೆ ಗಾಯವಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದ ಕಾರ್ಯಕ್ರಮದ ಮುಗಿದ ಬಳಿಕ ಚುನಾವಣಾ ಆಯೋಗ ನೇಮಿಸಿದ್ದ ವೀಡಿಯೋ ಕ್ಯಾಮೆರಾಮ್ಯಾನ್ ತನ್ನ ಕರ್ತವ್ಯ ನಡೆಸಲು ಮುಂದಾಗುತ್ತಿದ್ದಂತೆ ಹಲ್ಲೆ ನಡೆಸಿ ಕ್ಯಾಮೆರಾ ಕಿತ್ತು ಅದರಲ್ಲಿದ್ದ ವೀಡಿಯೋ ತುಣುಕುಗಳನ್ನು ಡಿಲೀಟ್ ಮಾಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ವೇದಿಕೆಯಲ್ಲಿ ಸಭೆ ಮುಗಿದ ಬಳಿಕ ಮೀಟಿಂಗ್ ನಡೆಸುತ್ತಿದ್ದುದ್ದನ್ನು ಕಂಡ ಸಿಬ್ಬಂದಿ ಚಿತ್ರೀಕರಣ ನಡೆಸಲು ಮುಂದಾಗಿದ್ದಾರೆ. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು ಸಿಬ್ಬಂದಿ ಕ್ಯಾಮೆರಾ ಕಿತ್ತು ಕ್ಯಾಮೆರಾದಿಂದಲೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿದ ಪರಿಣಾಮ ಸಿಬ್ಬಂದಿ ಕೈಗೆ ಗಾಯವಾಗಿದ್ದು, ಈ ವೇಳೆ ಸ್ಥಳಕ್ಕೆ ಚುನಾವಣಾಧಿಕಾರಿಗಳ ತಂಡ ಹಾಗೂ ಪೊಲೀಸರು ಆಗಮಿಸಿದ್ದು, ಈ ವೇಳೆಗೆ ಹಲ್ಲೆ ನಡೆಸಿದ್ದ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇನ್ನು ಕಿತ್ತುಕೊಂಡಿದ್ದ ಕ್ಯಾಮೆರಾವನ್ನು ಬಿಜೆಪಿ ನಾಯಕರು ಚುನಾವಣಾಧಿಕಾರಿಗಳಿಗೆ ಇದೇ ವೇಳೆ ಹಸ್ತಾಂತರಿಸಿದ್ದಾರೆ.