ಬೈಂದೂರು , ಮೇ 08: ಕರಾವಳಿಯ ಯುವಕರಿಗೆ ಸುರಕ್ಷೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕರ್ನಾಟಕ ಇವತ್ತು ಜಿಹಾದಿಗಳ ಅಡ್ಡವಾಗಿದೆ. ಕರಾವಳಿಯಲ್ಲಿ ಅಭಿವೃದ್ಧಿ ಮಾಡುವ ಬದಲು ಯುವಕರ ಹತ್ಯೆ ಮಾಡಲಾಗುತ್ತಿದೆ. ಬಂದರು ಅಭಿವೃದ್ಧಿ ಮಾಡಲು ಸರ್ಕಾರಕ್ಕೆ ಆಸಕ್ತಿಯಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ. ಕೆಂದ್ರದ ಹಣ ಬಳಕೆ ಮಾಡದೆ ದರೋಡೆ ಮಾಡುತ್ತಿದೆ. ಶಿವಾಜಿ ಜಯಂತಿಗೆ ಕರ್ನಾಟಕದಲ್ಲಿ ಅವಕಾಶವಿಲ್ಲ, ಆದರೆ ಟಿಪ್ಪುಜಯಂತಿಗೆ ಕಾಂಗ್ರೇಸ್ ಸರ್ಕಾರಕ್ಕೆ ಆಸಕ್ತಿ ತೋರಿಸಿದೆ. ಶಿವಾಜಿ, ಹನುಮ ನಮ್ಮ ಆದರ್ಶ. ಟಿಪ್ಪು ಕಾಂಗ್ರೇಸಿಗರ ಆದರ್ಶ. ಬೇಧಭಾವ ಇಲ್ಲದ ಆಡಳಿತ ನೀಡೋದು ನಮ್ಮ ಆದರ್ಶ. ಕಾಂಗ್ರೇಸ್ನ ನಿಲುವುಗಳು ರಾಷ್ಟ್ರೀಯತೆಗೆ ಧಕ್ಕೆಯಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಮೇ 08 ರ ಮಂಗಳವಾರ ಬೈಂದೂರು ಮಂಡಲ ಬಿಜೆಪಿಯ ವತಿಯಿಂದ ತ್ರಾಸಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಮೋದಿ ದೇಶದ ಪ್ರಧಾನಿಯಾದ ನಂತರ ಚಿತ್ರಣ ಬದಲಾಗಿದೆ. ಅನುದಾನದ ಪ್ರತಿ ಪೈಸೆ ಬಡವರ ಸೇವೆಗೆ ದೊರಕುತ್ತಿದೆ. ಬಡವರಿಗೆ ಕೇಂದ್ರ ಸರ್ಕಾರ ಧ್ವನಿಯಾಗಿದೆ ಎಂದರು.
ನಾನು ಕರ್ನಾಟಕಕ್ಕೆ ಬಂದರೆ ಸಿದ್ಧರಾಮಯ್ಯ ನಿಮಗೇನು ಕಷ್ಟ ಎಂದು ನೇರ ಪ್ರಶ್ನೆ ಮಾಡಿದ ಆದಿತ್ಯನಾಥ್, ಇಲ್ಲಿನ ರೈತ, ಯುವಕ ಸಂಕಷ್ಟದಲ್ಲಿದ್ದಾನೆ. ಹೀಗಾಗಿ ನಾನು ಕರ್ನಾಟಕಕ್ಕೆ ಬರುತ್ತೇನೆ. ಬಿಜೆಪಿಯ ಕೆಲಸಗಳನ್ನು ಅವರಿಗೆ ತಿಳಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಇವತ್ತು ರೈತರ ಸಾಲ ಮನ್ನಾ ಮಾಡಿದ್ದೇನೆ ಇವತ್ತು 10 ಲಕ್ಷ ಬಡವರಿಗೆ ವಸತಿ ನೀಡಿದ್ದೇನೆ. ವಿದ್ಯುತ್ ,ಶೌಚಾಲಯ ನಿರ್ಮಾಣ ಮಾಡಿದ್ದೇವೆ.ಎಲ್.ಪಿ.ಜಿ ಸಂಪರ್ಕ ನೀಡೋದರಲ್ಲೂ ನಾವು ಕರ್ನಾಟಕ್ಕಿಂತ ಮುಂದಿದ್ದೇವೆ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಯೋಜನೆಗನ್ನು ಯಾಕೆ ಜನರಿಗೆ ತಲುಪಿಸಿಲ್ಲ.ವಿಕಾಸ ಸಿದ್ದರಾಮಯ್ಯ ಅಜೆಂಡಾ ಅಲ್ಲ. ಯುವ ಸಮುದಾಯ, ರೈತ, ಅವರ ಅಜೆಂಡಾ ಅಲ್ಲ. ಕರ್ನಾಟಕವನ್ನು ಕಾಂಗ್ರೇಸ್ ನ ಎಟಿಎಂ ಮಾಡೋದು ಅವರ ಅಜೆಂಡಾ. ಬಿಜೆಪಿ ಕಾರ್ಯಕರ್ತರ ಕೊಲೆ ಅವರ ಅಜೆಂಡಾ ಜಿಹಾದಿ ತತ್ವ ಅವರ ಅಜೆಂಡಾ ಎಂದು ಕಿಡಿ ಕಾರಿದರು.
ಭಾರತ ಮಾತೆಯ ಮೂಲಕ ನಾವೆಲ್ಲರೂ ಸಂಬಂಧಿಗಳು.ರಾಷ್ಟ್ರೀಯತೆ ಗೆ ನಾವು ಸಮರ್ಪಿತರು. ಪ್ರಧಾನಿ ಮೋದಿಯವರ ಕೈ ಬಲಪಡಿಸಲು ನಾವೆಲ್ಲಾ ಸೇರಿದ್ದೇವೆ.ಕರಾವಳಿಯ ಮೀನುಗಾರರು ಬಿಜೆಪಿ ಬೆಂಬಲಿಗರು ಇದು ನನಗೆ ತುಂಬಾ ಸಂತೋಷ ನೀಡಿತು. ಕರ್ನಾಟಕ ಸರ್ಕಾರ ಮೀನುಗಾರರ ನಿರ್ಲಕ್ಷ್ಯ ಮಾಡಿದೆ.ಸಿದ್ದರಾಮಯ್ಯ ಸರ್ಕಾರ ಮೀನುಗಾರರ ಹಿತ ಕಾಯಲಿಲ್ಲ ಎಂದರು.
ಅಭ್ಯರ್ಥಿ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಈ ಚುನಾವಣೆ ಧರ್ಮ ಮತ್ತು ಅಧರ್ಮಗಳ ನಡುವೆ ನಡೆಯುತ್ತಿದೆ. ಧರ್ಮವೇ ಇದರಲ್ಲಿ ಗೆಲ್ಲುತ್ತದೆ. 18 ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಮಾಡದ ಕಾಂಗ್ರೆಸ್ ಅಭ್ಯರ್ಥಿಯನ್ನು ಜನ ಮನೆಗೆ ಕಳುಹಿಸಲಿದ್ದಾರೆ. ಈ ಬಾರಿ ಮತದಾನ ಮಾಡುವಾಗ ಮತದಾರರು ವಿವೇಚನೆಯಿಂದ , ಕ್ಷೇತ್ರದ ಹಿತದೃಷ್ಟಿಯಿಂದ ಮತದಾನ ಮಾಡಿ. ನಾನು ಕ್ಷೇತ್ರದ ಶಾಸಕನಾದರೆ ಅತ್ಯುತ್ತಮ ಕ್ಷೇತ್ರವನ್ನಾಗಿ ರೂಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಬೈಂದೂರು ಮಂಡಲದ ಪರವಾಗಿ ಸನ್ಮಾನಿಸಲಾಯಿತು. ರಾಜ್ಯ ಮಹಿಳಾ ಮೋರ್ಛಾದ ಅಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುತ್ಯಾರು, ಸಂಧ್ಯಾ ರಮೇಶ, ಜಿ.ಪಂ.ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟ್ವಾಡಿ, ಶೋಭಾ ಪುತ್ರನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ಯುವ ಮೋರ್ಛಾದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಕ್ಷೇತ್ರ ಸಂಚಾಲಕ ಪ್ರವೀಣ ಗುರ್ಮೆ, ನವೀನಚಂದ್ರ ಉಪ್ಪುಂದ ಉಪಸ್ಥಿತರಿದ್ದರು.
ಬೈಂದೂರು ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದೀಪಕಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಾಲಚಂದ್ರ ಭಟ್ ವಂದಿಸಿದರು.
ಮೀನುಗಾರರ ಹೊಗಳಿದ ಯೋಗಿ
ಯೋಗಿ ಅದಿತ್ಯನಾಥ್ ಕರಾವಳಿಯ ಮೀನುಗಾರರನ್ನು ಹಾಡಿ ಹೊಗಳಿದ್ದಾರೆ. ಮೀನುಗಾರರು ಶ್ರೀರಾಮನ ವಿಶ್ವಾಸನೀಯ ಭಕ್ತರು. ರಾಮಭಕ್ತ ಹನುಮನೂ ಕರ್ನಾಟಕ ನೆಲದ ಭಕ್ತ ಎಂದ ಯೋಗಿ ರಾಜ್ಯ ಸರ್ಕಾರ ಇವತ್ತು ಮೀನುಗಾರಿಕಾ ಬಂದರುಗಳ ಅಭಿವೃದ್ದಿ ಮಾಡಿಲ್ಲ. ರೈತರಿಗೆ ಸರಿಯಾಗಿ ಸ್ಪಂದಿಸಿಲ್ಲ. ಅವರು ಜಿಹಾದ್ ತತ್ವಗಳಲ್ಲಿಯೇ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂದರು.
ಸುಕುಮಾರ ಶೆಟ್ಟರನ್ನು ಗೆಲ್ಲಿಸೋಣ
ದೇಶದಲ್ಲಿ ಮೋದಿ ಸರ್ಕಾರದ ಬಂದ ನಂತರ ಬದಲಾವಣೆಗಳು ವೇಗವಾಗಿ ಆಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಬೇಕು. ಆ ನಿಟ್ಟಿನಲ್ಲಿ ಇಲ್ಲಿ ಸುಕುಮಾರ ಶೆಟ್ಟರನ್ನು ಗೆಲ್ಲಿಸಬೇಕು. ಆ ಮೂಲಕ ಮೋದಿ ಕೈ ಬಲ ಪಡಿಸಬೇಕು ಎಂದರು.
ಕ್ಷೇತ್ರದ ದೇವರನ್ನು ಸ್ಮರಿಸಿದ ಯೋಗಿ
ಯೋಗಿ ಆದಿತ್ಯನಾಥ್ ಹಿಂದಿಯಲ್ಲಿ ಭಾಷಣ ಆರಂಭಿಸಿದರು. ಮೊದಲಿಗೆ ಶಂಕರಾಚಾರ್ಯ ಸ್ಥಾಪಿತ ಕೊಲ್ಲೂರು ಮೂಕಾಂಬಿಕೆ, ಹಟ್ಟಿಯಂಗಡಿ ಸಿದ್ಧಿವಿನಾಯಕ, ಕಮಲಶಿಲೆ ದುರ್ಗಾಪರಮೇಶ್ವರಿ ದೇವರುಗಳಿಗೆ ಪ್ರಣಾಮ ಸಲ್ಲಿಸಿದರು. ನಂತರ ತನ್ನ ಎಂದಿನ ಸ್ಫೋಟಕ ಮಾತುಗಳನ್ನು ಆರಂಭಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು. ಮೋದಿ ಸರ್ಕಾರದ ಮಹತ್ವವನ್ನು ವಿವರಿಸಿದರು.
ಬಿಗಿ ಬಂದೋಬಸ್ತ್
ಯೋಗಿ ಕಾರ್ಯಕ್ರಮಕ್ಕಾಗಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಕೊಡಪಾಡಿಯ ಹತ್ತಿರ ಹೆಲಿಕಾಪ್ಟರ್ ಇಳಿಯಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಂದ ತ್ರಾಸಿಯ ತನಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಾರ್ಯಕ್ರಮದ ಆವರಣದ ಒಳಗೆ ಹೋಗುವಾಗ ಪ್ರತೀಯೋರ್ವರನ್ನು ಪರೀಕ್ಷಿಸಿಯೇ ಒಳ ಬಿಡಲಾಗುತ್ತಿತ್ತು.