ಮೇ, 08: ಮಹಿಳೆ ಧರಿಸುವ ಉಡುಪುಗಳು ಅತ್ಯಾಚಾರಕ್ಕೆ ಕಾರಣವಲ್ಲ. ಮಹಿಳೆಯರು ತೊಡುವ ಉಡುಪುಗಳಿಗೂ ಅವರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೂ, ಯಾವುದೇ ರೀತಿಯ ಸಂಬಂಧವಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ಮಹಿಳೆಯರು ಧರಿಸುವ ಉಡುಪುಗಳು ಅತ್ಯಾಚಾರಕ್ಕೆ ಕಾರಣ ಎನ್ನುವ ವಾದವನ್ನು ಖಂಡಿಸಿ ಮಾತನಾಡಿದ ಅವರು ಉಡುಪುಗಳು ಕಾರಣ ಎನ್ನುವುದಾದರೆ, ವೃದ್ದರು, ಹಾಗೂ ಹಸುಗೂಸುಗಳ ಮೇಲೆ ಏಕೆ ಅತ್ಯಾಚಾರಗಳು ನಡೆಯುತ್ತವೆ ಎಂದು ಪ್ರಶ್ನಿಸಿದ್ದಾರೆ.
ಎಫ್ಐಸಿಸಿಐ ಸಂಘಟಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಂಡು ಮಕ್ಕಳಲ್ಲಿ ಬೆಳೆಸುವ ಮನೋಸ್ಥಿತಿಯ ಬಗ್ಗೆ ನಾವು ಚಿಂತಿಸಬೇಕಾಗಿದೆ. ಕಾರಣ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರಿಗಳು ಹೆಚ್ಚಿನವರು ಅವರ ಕುಟುಂಬದವರು ಹಾಗೂ ಬಂಧು ಆಗಿರುವುದರಿಂದ ಮನೆ ಮಂದಿ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು. ಜತೆಗೆ ಹೆಣ್ಣು ಮಕ್ಕಳನ್ನು ನೋಡುವ ಗಂಡು ಮಕ್ಕಳ ಮನೋಸ್ಥಿತಿ ಬದಲಾಗಬೇಕಾಗಿದೆ. ಕುಟುಂಬಗಳು ಗಂಡು ಮಕ್ಕಳನ್ನು ಬೆಳೆಸುವಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಹೇಳಿದರು.