ಮಂಗಳೂರು, ಮೇ 8: ಕಾಂಗ್ರೆಸ್ ಮುಖಂಡ ಮತ್ತು ಕಾರ್ಪೋರೇಟರ್ ಎ.ಸಿ ವಿನಯ್ರಾಜ್ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ. ಭರತ್ ಶೆಟ್ಟಿ ಐಶಾರಾಮಿ ಬದುಕನ್ನು ನಡೆಸುತ್ತಿರುವವರು. ಅಧಿಕಾರದ ಅದಮ್ಯ ಬಯಕೆಯಿಂದ ಅವರು ಇಂಡಿಯನ್ ಡೆಂಟಲ್ ಕೌನ್ಸಿಲ್ನ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಅದರ ಸದಸ್ಯರಾದವರು. ಮಾತ್ರವಲ್ಲ, 1,187 ಸ್ನಾತಕೋತ್ತರ ಹೆಚ್ಚುವರಿ ಸೀಟುಗಳನ್ನು ಸೇರಿಸುವುದಕ್ಕಾಗಿ ರೂಪಾಯಿ 50 ಕೋಟಿಯಷ್ಟು ಹಣವನ್ನು ಲಂಚವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಡಾ. ಭರತ್ ಶೆಟ್ಟಿ ಡೆಂಟಲ್ ಕೌನ್ಸಿಲ್ನ ಸದಸ್ಯತ್ವ ಪಡೆಯುವುದಕ್ಕಾಗಿ ನಕಲು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕೌನ್ಸಿಲ್ನ ಪ್ರಾಥಮಿಕ ಸದಸ್ಯತ್ವದ ಅವಧಿ ಮುಗಿದ ಬಳಿಕವೂ ಸದಸ್ಯತನವನ್ನು ಕಾನೂನುಬಾಹಿರವಾಗಿ ನವೀಕರಿಸಿದ್ದಾರೆ. ಇಂಡಿಯನ್ ಡೆಂಟಲ್ ಕೌನ್ಸಿಲ್ನ ನಿಯಮದಂತೆ ಒಬ್ಬ ದಂತ ವೈದ್ಯ ಎರಡು ಕಾಲೇಜುಗಳಲ್ಲಿ ಬೋಧನೆ ಮಾಡುವಂತಿಲ್ಲ. ಆದರೆ ಭರತ್ ಶೆಟ್ಟಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ಹೊಂದಿರುವ ದಂತ ಕಾಲೇಜಲ್ಲಿ 2015ರಿಂದ ಪ್ರೊಫೆಸರ್ ಮತ್ತು ಪ್ರಾಂಶುಪಾಲರಾಗಿ ಕೆಲಸ ಮಾಡುವುದರ ಜೊತೆಗೆ ರಾಜಸ್ಥಾನದ ಉದಯಪುರ ವಿಶ್ವ ವಿದ್ಯಾನಿಲಯದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲ, ಕಾನೂನು ಬಾಹಿರವಾಗಿ ಇಂಡಿಯನ್ ಡೆಂಟಲ್ ಕೌನ್ಸಿಲ್ನ ಉಪಾಧ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗಂಭೀರ ಅರೋಪ ಮಾಡಿದ್ದಾರೆ.
ಭಾರತದ ಅನೇಕ ದಂತ ಕಾಲೇಜುಗಳಿಂದ ಕೋಟಿಗಟ್ಟಲೆ ಲಂಚ ಸ್ವೀಕರಿಸಿರುವ ಬಗ್ಗೆ ಡಾ. ಭರತ್ ಶೆಟ್ಟಿ ಮತ್ತು ರಾಜಸ್ಥಾನದ ಉದಯಪುರದ ಸಂಶೋಧನಾ ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾಗಿದ್ದ ಡಾ. ಭಗವಾನ್ ದಾಸ್ ವಿರುದ್ಧ ಸಾಕಷ್ಟು ಆರೋಪಗಳಿವೆ. 2017-18ರಲ್ಲಿ ನಡೆದ 50 ಕೋಟಿ ಮೌಲ್ಯದ ಡಿಸಿಐ ಹಗರಣದಲ್ಲಿ ಡಾ. ಭರತ್ ಶೆಟ್ಟಿ ಭಾಗಿಯಾಗಿರುವುದರ ಕುರಿತು ವದಂತಿಗಳಿವೆ. ಈ ಕುರಿತು ಡಾ. ಭರತ್ ಶೆಟ್ಟಿ ಸೇರಿದಂತೆ ಒಟ್ಟು 7 ಜನರ ವಿರುದ್ಧ ಕೇರಳ ಹೈ ಕೋರ್ಟಿನಲ್ಲಿ ಪಿಐಎಲ್ ಪ್ರಕರಣ ದಾಖಲಾಗಿದೆ. ಪರಿಣಾಮವಾಗಿ ಡಾ. ಭರತ್ ಶೆಟ್ಟಿ ಮನೆಗೆ ಸಿಬಿಐ ದಾಳಿ ಕೂಡಾ ನಡೆದಿದೆ ಎಂದು ಹೇಳಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಹಿದ್ದೀನ್ ಬಾವಾ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಜನ ಮೆಚ್ಚುಗೆಯನ್ನು ಪಡೆದ ಶಾಸಕರಾಗಿದ್ದು, ಜನಪ್ರತಿನಿಧಿಯಾಗಲು ಯೋಗ್ಯ ಅಭ್ಯರ್ಥಿಯಾಗಿರುತ್ತಾರೆ. ಹೀಗಾಗಿ, ಡಾ. ಭರತ್ ಶೆಟ್ಟಿ ಜನರಲ್ಲಿ ಮತಗಳನ್ನು ಕೋರುವ ಬದಲು ಡೆಂಟಲ್ ಕೌನ್ಸಿಲ್ ಹಗರಣದ ಕುರಿತು ಜನರಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.