ಕಾರ್ಕಳ, ಮೇ 07: ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಬೋಳ ರಾಕೇಶ್ ಪೂಜಾರಿ 2 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಬೋಳ ಗ್ರಾಮದ ಐತಿಹಾಸಿಕ ಇತಿಹಾಸವುಳ್ಳ ಬೋಳ ಮಲ್ಲಿಗೆ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ ಅರ್ಚಕರಾದ ಹರೀಶ್ ಪೂಜಾರಿ ಮತ್ತು ಪ್ರಮೀಳಾ ಹರೀಶ್ ಪೂಜಾರಿಯವರ ಪುತ್ರ ರಾಕೇಶ್ ಪೂಜಾರಿ ಭರವಸೆಯ ಕರಾಟೆ ಪಟು. ತೆರೆಮರೆಯಲ್ಲಿ ಮಿಂಚುತ್ತಿದ್ದ ಇವರಿಗೆ ಕ್ರೀಡಾಕ್ಷೇತ್ರದಲ್ಲಿ ಎಳೆಯ ವಯಸ್ಸಿನಲ್ಲಿಯೇ ಆಸಕ್ತಿ ಇತ್ತು. ಕರಾಟೆ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ರಾಕೇಶ್ ಪೂಜಾರಿ ಇದೀಗ ಕರಾವಳಿಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ಜಿಲ್ಲೆಗೆ ಕೀರ್ತಿ ತರುವ ಸಾಧನೆ ಮಾಡಿದ್ದಾರೆ.
ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಆಗಿರುವ ರಾಕೇಶ್ ಪೂಜಾರಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಒಟ್ಟು 30 ಪದಕಗಳಲ್ಲಿ 18 ಚಿನ್ನ, 9 ಬೆಳ್ಳಿ, 3 ಕಂಚಿನ ಪದಕ ಪಡೆದಿದ್ದಾರೆ. ರಾಷ್ಟ ಹಾಗೂ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಇವರು, 2018 ರ ಮೇ 6ರಂದು ಶ್ರೀಲಂಕಾದಲ್ಲಿ ಜರಗಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ ಟೂರ್ನಿಮೆಂಟ್ನಲ್ಲಿ ಭಾಗವಹಿಸಿ 2 ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಇದೀಗ ಕರಾಟೆ ಪಟು ರಾಕೇಶ್ ಪೂಜಾರಿ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.