ಬೈಂದೂರು, ಮೇ 07: ಕಳೆದ 18 ವರ್ಷಗಳ ಕಾಲ ಬೈಂದೂರು ಕ್ಷೇತ್ರವನ್ನು ಪ್ರತಿನಿಧಿಸಿದ ಕಾಂಗ್ರೆಸ್ ಶಾಸಕರಿಂದ ನಡೆದ ಅಭಿವೃದ್ದಿ ಯಾವುದೂ ಕಾಣುತ್ತಿಲ್ಲ. ಈ ಹಿಂದೆ ಶಾಸಕರಾಗಿದ್ದ ಲಕ್ಷ್ಮೀನಾರಾಯಣರ ಅವಧಿಯಲ್ಲಿ ಅಭಿವೃದ್ದಿ ವೇಗ ಪಡೆದುಕೊಂಡಿತ್ತು. ನಂತರ ಶಾಸಕರಾದ ಗೋಪಾಲ ಪೂಜಾರಿಯವರು ನಮ್ಮ ಅವಧಿಯಲ್ಲಿನ ಕಾಮಗಾರಿಗಳನ್ನು ಮುಂದುವರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 4 ಸೇತುವೆಗಳನ್ನು ನೀಡಿದೆ. ಸಾಕಷ್ಟು ಅನುದಾನಗಳನ್ನು ನೀಡಿದೆ. ನಾನು ಸಂಸದನಾಗಿದ್ದ ಸಂದರ್ಭ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದೆ ಎಂದು ಮಾಜಿ ಸಂಸದ ಬಿ.ವೈ.ರಾಘವೇಂದ್ರ ದೂರಿದರು.
ಅವರು ಮೇ.6ರಂದು ಹೆಮ್ಮಾಡಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನಾನು ಈಗಾಗಲೇ ಶಿರೂರಿನಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಈ ಭಾಗದಲ್ಲಿ ಕಾಂಗ್ರೆಸ್ ವಿರುದ್ಧ ಜನರ ಆಕ್ರೋಶ ದೊಡ್ಡ ಪ್ರಮಾಣದಲ್ಲಿ ಕಾಣುತ್ತಿದೆ. ಖಂಡಿತಾವಾಗಿಯೂ ಈ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಜನ ಬಿಜೆಪಿಯನ್ನು ಆಶೀರ್ವದಿಸಲಿದ್ದಾರೆ ಎಂದರು.
ಕಿಂಡಿ ಅಣೆಕಟ್ಟುಗಳ ಸಮರ್ಪಕ ನಿರ್ವಹಣೆಯಾಗದೇ ಇರುವುದು, ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನದ ಹಿನ್ನೆಡೆಯಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ. ಈಗ ಬೈಂದೂರು ತಾಲೂಕು ಘೋಷಣೆಯಾಗಿದೆ. ಆದರೆ ಮೂಲಭೂತ ಸೌಕರ್ಯವನ್ನು ಒದಗಿಸುವ ಕೆಲಸವಾಗಿಲ್ಲ. ಬೈಂದೂರು ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ, ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತರುವ ಕೆಲಸ ಆಗಿಲ್ಲ. ಮೀನುಗಾರರ ಅಭಿವೃದ್ದಿಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಕೂಡಾ ಸಮರ್ಪಕವಾಗಿ ಕಾಮಗಾರಿ ನಡೆಯುತ್ತಿಲ್ಲ. ಹಿಂದೆ ನಮ್ಮ ಸರ್ಕಾರ ಇದ್ದ ಸಂದರ್ಭ ಗಂಗೊಳ್ಳಿ, ಕೊಡೇರಿ ಬಂದರು ಅಭಿವೃದ್ದಿಗೆ300 ಕೋಟಿ ಅನುದಾನ ನೀಡುವ ಕೆಲಸ ಆಗಿತ್ತು. ಉಪ್ಪುಂದ ಬಂದರಿಗೆ 30 ಕೋಟಿ ಘೋಷಣೆ ಮಾಡಿ, ಟೆಂಡರು ಕರೆಯುವುದಷ್ಟೆ ಬಾಕಿ ಇತ್ತು. ಅದನ್ನು ಮುಂದುವರಿಸುವ ಕೆಲಸ ಈ ಸರ್ಕಾರ ಮಾಡಿಲ್ಲ ಎಂದರು.
ಕಾರವಾರ-ಉಡುಪಿಯ ತನಕ ಎಲ್ಲಿಯೂ ಪ್ರವಾಸಿ ತಾಣ ಅಭಿವೃದ್ದಿಯಾಗಿಲ್ಲ. ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಬೈಂದೂರು ಕ್ಷೇತ್ರದ ಸಂಪನ್ಮೂಲವನ್ನು ಬಳಸಿಕೊಂಡು ಪ್ರವಾಸೋಧ್ಯಮ ಅಭಿವೃದ್ದಿ ಮಾಡಲಾಗುವುದು. ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ಮಾಡಿದರೆ ಪ್ರವಾಸಿಗಳನ್ನು ಆಕರ್ಷಿಸಲು ಸಾಧ್ಯವಿದೆ. ಈ ಭಾಗದಲ್ಲಿ ಗೇರುಬೀಜ ಪ್ರಮುಖ ವಾಣಿಜ್ಯ ಬೆಳೆ. ಇಲ್ಲಿ ಸಾಕಷ್ಟು ಸಂಖ್ಯೆಯ ಗೇರು ಕೃಷಿಕರು, ಕಾರ್ಮಿಕರು, ಕೈಗಾರಿಕೋದ್ಯಮಿಗಳು ಇದ್ದಾರೆ. ಈ ಜಿಲ್ಲೆಯಲ್ಲಿ ಗೇರು ಅಭಿವೃದ್ದಿ ಮಿಷನ್ ಸ್ಥಾಪನೆ, ಈ ಭಾಗದಲ್ಲಿ ಗೋಡಂಬಿ ಸಂಸ್ಕರಣ ಘಟಕ ಸ್ಥಾಪನೆ, ಕಾರ್ಮಿಕರ ಅನುಕೂಲತೆಗೆ ಇ.ಎಸ್.ಐ ಆಸ್ಪತ್ರೆ ಸ್ಥಾಪನೆಗೆ ಒತ್ತು ನೀಡಲಾಗುವುದು. ಮೀನುಗಾರರ ಪ್ರಮುಖ ಬೇಡಿಕೆಯಾದ ಈಗಿರುವ 200ಲೀಟರ್ ಸೀಮೆಎಣ್ಣೆಯನ್ನು ದುಪ್ಪಟ್ಟುಗೊಳಿಸುವ ಬೇಡಿಕೆ, ಮೀನುಗಾರರು ಆಕಸ್ಮಿಕ ಅವಘಡಗಳಿಗೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾದಾಗ 6 ತಿಂಗಳುಗಳ ಕಾಲ ಪ್ರಮಾಣಪತ್ರ ಸಿಗದ ವ್ಯವಸ್ಥೆ ಈಗ ಇತ್ತು. ಅದನ್ನು ಬದಲಾವಣೆ ಮಾಡಿ, ಅವಧಿ ಸಂಕ್ಷೀಪ್ತಕರಿಸಿ ಕಾಣೆಯಾಗಿರುವುದು ನಿಜವಾದರೆ ಕಡಿಮೆ ಅವಧಿಯಲ್ಲಿ ಪ್ರಮಾಣ ಪತ್ರ ಹಾಗೂ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದು. ಈ ಔಆಗದ ಬಂದರುಗಳ ಅಭಿವೃದ್ದಿಗೆ ಪ್ರಮುಖ ಆಧ್ಯತೆ ನೀಡಲಾಗುವುದು. ಈ ಎಲ್ಲಾ ಅಂಶಗಳು ನಮ್ಮ ಪ್ರನಾಳಿಕೆಯಲ್ಲಿ ಇದ್ದು ಸರ್ಕಾರ ಅಧಿಕಾರಕ್ಕೆ ತಂದ ಕೂಡಲೆ ಅನುಷ್ಠಾನ ಮಾಡುವ ಮೂಲಕ ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ವೇಗ ನೀಡಲಾಗುವುದು ಎಂದರು.
ಹಿಂದೆ ಲಕ್ಷ್ಮೀನಾರಾಯಣರು ಮಾಡಿದ ಅಭಿವೃದ್ದಿ ಕಾರ್ಯಕ್ಕೆ ಈಗಿನ ಶಾಸಕರು ಬ್ರೇಕ್ ಹಾಕಿದ್ದಾರೆ. ಮತ್ತೆ ಅಭಿವೃದ್ದಿ ವೇಗ ಪಡೆಯಬೇಕಾದರೆ ಸುಕುಮಾರ ಶೆಟ್ಟರು ಶಾಸಕರಾಗಬೇಕು ಎಂದ ಅವರು, ಕ್ಷೇತ್ರದಲ್ಲಿ ಸುಕುಮಾರ್ ಶೆಟ್ಟರು ಮೂರು ಹಂತದ ತಿರುಗಾಟ ಮಾಡಿದ್ದಾರೆ. ನಮಗೆ ಪೂರಕವಾದ ವಾತಾವರಣ ಕ್ಷೇತ್ರದಲ್ಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಮ್.ಸುಕುಮಾರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ನವೀನಚಂದ್ರ ಉಪ್ಪುಂದ ಉಪಸ್ಥಿತರಿದ್ದರು.