ಮಂಗಳೂರು, ಸೆ23: 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಹೈಸ್ಪೀಡ್ ಇಂಟರ್ಸೆಪ್ಟೆರ್ ನೌಕೆಯನ್ನು ನಗರದ ತಣ್ಣೀರು ಬಾವಿ ಭಾರತಿ ಡಿಫೆನ್ಸ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯು ಇಂಡಿಯನ್ ಕೋಸ್ಟ್ಗಾರ್ಡ್ಗೆ ಹಸ್ತಾಂತರಿಸಿದೆ.
ಬಿಡಿಐಎಲ್ನ ಸಿಒಒ ನರೇಂದ್ರ ಕುಮಾರ್ ಹಾಗು ಇತರ ಅಧಿಕಾರಿಗಳು ನೌಕೆಯನ್ನು ನೀರಿಗೆ ಇಳಿಸುವ ಮೂಲಕ ತಣ್ಣೀರು ಬಾವಿಯ ಬಿಡಿಐಎಲ್ ಆವರಣದಲ್ಲಿ ಅಧಿಕೃತವಾಗಿ ನೌಕೆಯನ್ನು ಹಸ್ತಾಂತರಿಸಿದರು.
ಹೈಸ್ಪೀಡ್ ಇಂಟರ್ಸೆಪ್ಟೆರ್ ನೌಕೆಯು ಸುಮಾರು 54ಟನ್ ತೂಕವಿದ್ದು, 18 ಕೋಟಿ ರೂ. ಅಂದಾಜು ವೆಚ್ಚದಿಂದ ನಿರ್ಮಿತವಾಗಿದೆ. ಸಮುದ್ರದ ಯಾವುದೇ ಪರಿಸ್ಥಿತಿಗೆ ತಕ್ಕಂತೆ ಸಂಚರಿಸಬಲ್ಲ ಈ ನೌಕೆ, ಕಡಿಮೆ ನೀರಿನಲ್ಲೂ ಸರಾಗವಾಗಿ ಓಡುವ ಸಾಮರ್ಥ್ಯವನ್ನು ಹೊಂದಿದೆ.
ಕೋಸ್ಟ್ ಗಾರ್ಡ್ ಇದನ್ನು ತಮಗೆ ಬೇಕಾದಂತೆ ಆಂತರಿಕ ವಿನ್ಯಾಸ ಮಾಡಲಿದ್ದು, ಮುಂದಿನ ತಿಂಗಳಿನಿಂದ ಈ ನೌಕೆ ಕಾರ್ಯಾರಂಭ ಮಾಡಲಿದೆ. ಭಾರತಿ ಡಿಫೆನ್ಸ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮೂಲಕ ಈಗಾಗಲೇ ಐದು ಸಣ್ಣ ನೌಕೆಗಳನ್ನು ಅನಾವರಣಗೊಳಿಸಿದ್ದು, ಇನ್ನೊಂದು ನೌಕೆ ಮುಂದಿನ ಡಿಸೆಂಬರ್ ವೇಳೆಗೆ ಬರಲಿದೆ. ಇದುವರೆಗೆ ಸುಮಾರು 20 ನೌಕೆಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಸ್ಟ್ಗಾರ್ಡ್ ಡಿಐಜಿ ದಾಸಿಲಾ, ಅತುಲ್ ಪಾರ್ಲಿಕರ್ ಪವಿತ್ರನ್, ಅಲೋಕನ್, ಆರ್ ಎಸ್ ಮೋಂಗ, ಪ್ರವೀಣ್ ಪವಿತ್ರನ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.