ಕುಂದಾಪುರ, ಮೇ 07 : ನುಡಿದಂತೆ ನಡೆದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳು ಜನರನ್ನು ತಲುಪಿವೆ. ಕುಂದಾಪುರ ಕ್ಷೇತ್ರದಲ್ಲಿ ಸತತ 18 ವರ್ಷ ಶಾಸಕರಾಗಿರುವ ಬಿಜೆಪಿ ಅಭ್ಯರ್ಥಿ ಬಗ್ಗೆ ಜನ ಅಸಮಾಧಾನ ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ದಿ ಮತ್ತು ಶಾಸನಬದ್ದವಾಗಿ ವಿಧಾನಸಭೆಯಲ್ಲಿ ಮಾತನಾಡುವ ಅಭ್ಯರ್ಥಿಯನ್ನು ಜನ ಬಯಸಿದ್ದು, ಕಾಂಗ್ರೆಸ್ನ ಒಮ್ಮತದ ಅಭ್ಯರ್ಥಿಯಾಗಿ ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ ಮಲ್ಲಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಇಲ್ಲ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ, ಚುನಾವಣಾ ವೀಕ್ಷಕರಾದ ಜಿ.ಎ ಬಾವ ಹೇಳಿದರು
ಕುಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜನಧನ ಖಾತೆಯ ಮೂಲಕ 15 ಲಕ್ಷ ಖಾತೆಗೆ ಹಾಕುತ್ತೇವೆ ಎನ್ನುವ ಸುಳ್ಳು ಭರವಸೆ ನೀಡಿದರು. ಈಗ ಪ್ರನಾಳಿಕೆಯಲ್ಲಿಯೂ ಕೂಡಾ ಅಂಥಹದ್ದೆ ಭರವಸೆಗಳನ್ನು ಇಟ್ಟಿದ್ದಾರೆ. ಬಿಜೆಪಿ ಪ್ರನಾಳಿಕೆಯ ಬಗ್ಗೆ ಜನತೆಗೆ ವಿಶ್ವಾಸವಿಲ್ಲ. ನಮ್ಮ ಸರ್ಕಾರ ಈ ಹಿಂದೆ ಪ್ರನಾಳಿಕೆಯಲ್ಲಿ ಘೋಷಿಸಿದ ಅಂಶಗಳನ್ನು 95.5ರಷ್ಟು ಈಡೇರಿಸಿದೆ. ಹಾಗಾಗಿ ಮತ್ತೆ ರಾಜ್ಯದಲ್ಲಿ ಸುಸ್ಥಿರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.
ಜಿಲ್ಲೆಯ ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಕುಂದಾಪುರ ಕ್ಷೇತ್ರದಲ್ಲಿ ಬದಲಾವಣೆಗಳು ಆಗಿಲ್ಲ. ಶಾಸನಬದ್ದ ಅನುದಾನ ಹೊರತು ವಿಶೇಷ ಅನುದಾನವನ್ನು ಶಾಸಕರು ತರುವ ಕೆಲಸ ಮಾಡಿಲ್ಲ. ನಮ್ಮ ಅಭ್ಯರ್ಥಿ ಅಧಿಕಾರ ಇಲ್ಲದಿದ್ದರೂ ಪ್ರಭಾವ ಬಳಸಿ 500ಕ್ಕೂ ಹೆಚ್ಚು ಬಡವರಿಗೆ ಮನೆ ಕೊಡಿಸುವ ಕೆಲಸ ಮಾಡಿದ್ದಾರೆ. ಕುಂದಾಪುರ ಕ್ಷೇತ್ರದ ಸಮಸ್ಯೆಗಳನ್ನು ಆಲಿಸುವ, ಸಾಕಷ್ಟು ವರ್ಷದಿಂದ ಕುಂಟುತ್ತಾ ಸಾಗುತ್ತಿರುವ ಮೇಲ್ಸೆತುವೆ ಪರಿಸ್ಥಿತಿ, 94ಸಿ, 94ಸಿಸಿ, ಡೀಮ್ಡ್ ಫಾರೆಸ್ಟ್, ಸಿಆರ್ಜೆಡ್ ಮೊದಲಾದ ಸಮಸ್ಯೆಗಳ ಸಮರ್ಪಕ ಪರಿಹಾರ ಆಗಿಲ್ಲ. ಜನರು ಕೂಡಾ ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂದರು.
ಈಗಾಗಲೇ ಬಿಜೆಪಿಯಲ್ಲಿದ್ದವರೇ ಅಸಮಾಧಾನಗೊಂಡು ಕಾಂಗ್ರೆಸ್ ಸೇರುತ್ತಿದ್ದಾರೆ. ಅಭಿವೃದ್ದಿ ಪರ ಚಿಂತನೆಯನ್ನು ಕ್ಷೇತ್ರದ ಜನತೆ ಹೊಂದಿದ್ದಾರೆ. ನಮ್ಮ ಅಭ್ಯರ್ಥಿ ಈಗಾಗಲೇ ಮನೆ ಮನೆ ಭೇಟಿ ಮಾಡಿ ನೇರ ಮತದಾರರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದ್ದು, ನಾವು ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ಜಯ ಗಳಿಸಲಿದ್ದೇವೆ ಎಂದರು.
ಕರ್ನಾಟಕ ರಾಜ್ಯ ಇವತ್ತು ಅಭಿವೃದ್ದಿಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ ಅಭಿವೃದ್ದಿಗೆ ಬಿಜೆಪಿ ತತ್ತರಿಸಿ ಹೋಗಿದೆ. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರ್ಕಾರ ಹಸಿವು ಮುಕ್ತ ಮಾಡುತ್ತಿದ್ದರೆ ಬಿಜೆಪಿಗರು ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಖಂಡಿತಾ ಸಾಧ್ಯವಿಲ್ಲ. ಪುನಃ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿ ರತ್ನಪ್ರಸಾದ್ ಜೈನ್, ಕ್ಷೇತ್ರ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ, ಇಂಟೆಕ್ ಉಪಾಧ್ಯಕ್ಷನ ಎನ್.ಆರ್.ಹೆಗಡೆ, ಪುಟ್ಟಸ್ವಾಮಿ ಉಪಸ್ಥಿತರಿದ್ದರು.