ಚಿತ್ರದುರ್ಗ, ಮೇ 06: ಕೋಟೆಯ ನಾಡು ಚಿತ್ರದುರ್ಗದ ಮಹಾ ಜನತೆಗೆ ನನ್ನ ನಮಸ್ಕಾರಗಳು. ವೀರ ಮದಕರಿ ನಾಯಕ, ವೀರ ವನಿತೆ ಓಬವ್ವಗೆ ನನ್ನ ನಮನಗಳು, ಮಾದರ ಚನ್ನಯ್ಯ, ಮರುಘಾ ಶರಣರಿಗೆ ನನ್ನ ನಮಸ್ಕಾರಗಳು ಎಂದು ಕೋಟೆ ನಾಡಿನಲ್ಲಿ ಚುನಾವಣಾ ಭಾಷಣ ಆರಂಭಿಸಿದ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ಕ್ಕೆ ದಲಿತರು ಬೇಕಾಗಿಲ್ಲ ಅವರಿಗೆ ಬೇಕಾಗಿರೋದು ಕೇವಲ ಡೀಲ್ ಎಂದು ನೇರ ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷ ಮತಕ್ಕಾಗಿ ಧರ್ಮ, ಜಾತಿಗಳನ್ನು ವಿಭಜಿಸಿ, ಇತಿಹಾಸವನ್ನು ತಿರುಚುತ್ತಿದೆ. ಮತಕ್ಕಾಗಿ ಇಲ್ಲಿ ಸುಲ್ತಾನರ ಜಯಂತಿಯನ್ನು ಮಾಡುತ್ತಿದ್ದಾರೆ ಆದರೆ ಈ ನಾಡಿನ ಹೆಮ್ಮೆಯ ಮದಕರಿ ನಾಯಕನನ್ನು ಮರೆತಿದ್ದಾರೆ. ಚಿತ್ರದುರ್ಗದ ಜನರಿಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದೆ. ಮದಕರಿ ನಾಯಕ, ಓಬವ್ವಳ ಸಾಧನೆಯನ್ನು ಮರೆತು ಜನರಿಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಕಲ್ಯಾಣ ಮಾಡುವುದಾಗಿ ಹೇಳಿ, ಇಲ್ಲಿನ ಜನಪ್ರತಿನಿಧಿ ಕೊಳವೆಬಾವಿ ಕೊರೆಸುವ, ಹಾಸ್ಟೆಲ್ಗಳಿಗೆ ಹಾಸಿಗೆ ಒದಗಿಸುವ ಯೋಜನೆಗಳಲ್ಲಿ ದುಡ್ಡು ಕೊಳ್ಳೆ ಹೊಡೆದರು’ ಎಂದು ಮೋದಿ ಅವರು ಸಚಿವ ಎಚ್.ಆಂಜನೇಯ ಹೆಸರು ಹೇಳದೆ ಆರೋಪಿಸಿದರು.ಜನಕಲ್ಯಾಣದ ಯೋಜನೆಗಳ ಹೆಸರಿನಲ್ಲಿ ಮಂತ್ರಿಗಳು ತಮ್ಮ ಕಲ್ಯಾಣ ಮಾಡಿಕೊಂಡಿರುವುದು ಇಲ್ಲಿನ ಮಕ್ಕಳಿಗೂ ತಿಳಿದಿದ್ದು, ಗಂಗಾಕಲ್ಯಾಣ ಯೋಜನೆಯಡಿ ನೀರಿಗಾಗಿ 1,200 ಕೊಳವೆ ಬಾವಿ ಕೊರೆಸುತ್ತೇನೆಂದು, ಅದರಲ್ಲೂ ಹಣ ಲೂಟಿ ಮಾಡಿದರು ಎಂದರು.