ಮಂಗಳೂರು, ಮೇ 06: ದ.ಕ.ಜಿಲ್ಲಾ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಮೇ 6 ರ ಭಾನುವಾರ ನಗರದಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಡಾ. ಮಹೇಂದ್ರ ಸಿಂಗ್ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ ಬಿಡುಗಡೆ ಮಾಡಿದರು.
ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಪ್ರಣಾಳಿಕೆ ರಚನಾ ಸಮಿತಿಯು ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಕ್ಕೂ ತೆರಳಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಬಳಿಕ ಆಧಾರದ ಮೇಲೆ ಈ ಪ್ರಣಾಳಿಕೆ ತಯಾರಿಸಲಾಗಿದೆ. ಪ್ರವಾಸೋಧ್ಯಮ, ಕೃಷಿ ವಲಯ, ಮರಳು ನೀತಿ, ತುಳು ಬಾಷೆ, ಕೋಮು ಸಾಮರಸ್ಯ, ಭ್ರಷ್ಟಾಚಾರ ನಿರ್ಮಾಲನೆ, ಮಂಗಳೂರು ಮಹಾನಗರ ಅಭಿವೃದ್ದಿ ಉದ್ಯೋಗ, ಹಾಗೂ ಎಂಡೋಸಲ್ಫಾನ್ ಪೀಡಿತರಿಗೆ ವಿಶೇಷ ಅಧ್ಯತೆಯನ್ನು ಪ್ರಣಾಳಿಕೆ ಒಳಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ತಿಳಿಸಿದ ಅಂಶಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.
ಕೇಂದ್ರದ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದರೂ ಕೂಡ ರಾಜ್ಯ ಸರಕಾರ ಸ್ಪಂದನೆ ನೀಡದ ಕಾರಣ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದರೆ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ , ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮುಂತಾದವರು ಉಪಸ್ಥಿತರಿದ್ದರು.