ಮೇ 06 :ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೇ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.ಅದಿತಿ ಸಿಂಗ್ ಜೊತೆಗಿನ ರಾಹುಲ್ ಗಾಂಧಿಯ ಕೆಲವು ಫೋಟೋಗಳೊಂದಿಗೆ ಈ ಸುದ್ದಿ ಸಾಕಷ್ಟು ವೈರಲ್ ಆಗಿದ್ದು, ಇವೆಲ್ಲವೂ ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.
ಈ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ಮಾಧ್ಯಮಕ್ಕೆ ನೀಡಿರುವ ಶಾಸಕಿ ಅದಿತಿ ಸಿಂಗ್, ಹರಿದಾಡುತ್ತಿರುವ ಮಾಹಿತಿಯೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.“ರಾಹುಲ್ ಗಾಂಧಿ ಅವರು ತನ್ನ `ರಾಖಿ’ ಸಹೋದರ. ಇಂತಹ ವದಂತಿಗಳಿಂದ ನನಗೆ ಬೇಸರವಾಗಿದೆ. ರಾಹುಲ್ ಜಿಗೆ ನಾನು ರಾಖಿ ಕಟ್ಟಿದ್ದೇನೆ. ಆದ್ದರಿಂದ ಅವರು ನನಗೆ ಸಹೋದರನೆಂದು ನಾನು ಸ್ಪಷ್ಟಪಡಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಇಂತಹ ವದಂತಿಗಳಿಂದ ನಾನು ದುಃಖಿತಳಾಗಿದ್ದೇನೆ” ಎಂದು ಸಿಂಗ್ ಹೇಳಿದ್ದಾರೆ.
29 ರ ಹರೆಯದ ಅದಿತಿ ಸಿಂಗ್ ಅವರು ಅಮೆರಿಕದ ಡ್ನೂಕ್ ವಿವಿಯಲ್ಲಿ ಮ್ಯಾನೇಜ್ಮೆಂಟ್ ಶಿಕ್ಷಣ ಪಡೆದಿದ್ದು, ರಾಯ್ಬರೇಲಿಯ 5 ಬಾರಿಯ ಶಾಸಕ ಅಖೀಲೇಶ್ ಸಿಂಗ್ ಅವರ ಪುತ್ರಿ . ಕಳೆದ ಚುನಾವಣೆಯಲ್ಲಿ ಹಾಗೂ ತಮ್ಮ ಮೊದಲ ಚುನಾವಣೆಯಲ್ಲಿ 90 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಶನಿವಾರ ಫೇಸ್ ಬುಕ್, ಟ್ವಿಟ್ಟರ್ ಮತ್ತು ವ್ಯಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅದಿತಿ ಸಿಂಗ್ ಅವರ ನಕಲಿ ಫೋಟೋವನ್ನು ಸೃಷ್ಟಿಸಿ ಅದನ್ನು ರಾಹುಲ್ ಗಾಂಧಿ ತಾಯಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಿಂತಿರುವ ರೀತಿ ಎಡಿಟ್ ಮಾಡಿ ಹರಿಯಬಿಡಲಾಗಿತ್ತು.