ಮಂಗಳೂರು ಮೇ 05: ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉನ್ನತ ಸ್ಥಾನವನ್ನು ನೀಡಲಾಗಿದೆ. ಲೋಕಸಭೆಯಲ್ಲಿ ವಿಪಕ್ಷ ಸ್ಥಾನವನ್ನು ನೀಡಲಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆಯ ಸ್ಥಾನಕ್ಕೆ ಸರಿಯಾದ ಮಾನ್ಯತೆ ಕೇಂದ್ರ ಸರಕಾರ ನೀಡಿಲ್ಲ ಎಂದು ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಕಿಡಿಕಾರಿದ್ದಾರೆ.
ಕೆಲಸ ಕಾರ್ಯ ಬಿಟ್ಟು ಮೋದಿ ಕರ್ನಾಟಕ ಸುತ್ತುತ್ತಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿ ಆದರೆ ಕರ್ನಾಟಕದಲ್ಲಿ ಮೋದಿ ಬಿಜೆಪಿಯ ಪ್ರಚಾರ ಮಂತ್ರಿ ಆಗಿದ್ದಾರೆ. ಜನರಿಗೆ ಸುಳ್ಳು ಹೇಳುತ್ತಾ ಮೋದಿಯವರು ಕನಸಿನ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಕೇವಲ ಸುಳ್ಳುಗಳನ್ನು ಮಾತ್ರ ಮಾತನಾಡುತ್ತಾರೆ. ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಮೋದಿ ಮೋಸ ಮಾಡಿದ್ದಾರೆ. ಮೋದಿ ಚುನಾವಣಾ ಪ್ರಚಾರ ಮಾಡುವ ಬದಲು ಕರ್ನಾಟಕದ ಜನರಲ್ಲಿ ಕ್ಷಮೆ ಕೇಳಬೇಕಾಗಿದೆ. ಬಿಜೆಪಿಯವರಿಗೆ, ವಿರೋಧಿಗಳಿಗೆ ಎರಡು ಕಾನೂನು ಇದೆ ಎಂದು ಮೋದಿ ಭಾವಿಸಿದ್ದಾರೆ. ನಮ್ಮದು ಬಹುಸಂಸ್ಕೃತಿಯುಳ್ಳ ದೇಶ. ಮೋದಿ, ಅಮಿತ್ ಶಾ ದೇಶವನ್ನ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಕರಿಗೆ ಇನ್ನೂ ಮೋದಿ ಉದ್ಯೋಗ ದೊರಕಿಸಿಕೊಟ್ಟಿಲ್ಲ. ಯುವಕರಿಗೆ ಪಕೋಡಾ, ಪಾನ್ ಬ್ಯುಸಿನೆಸ್ ಮಾಡಿ ಎಂದು ಮೋದಿ ಹೇಳುತ್ತಾರೆ. ಕಾಂಗ್ರೆಸ್ ಕೇಳಿದ ಪ್ರಶ್ನೆಗಳಿಗೆ ಮೊದಲು ಮೋದಿ ಉತ್ತರಿಸಲಿ. ಮೋದಿ ಮೊದಲು ಮೌನವ್ರತ ತೊರೆಯಿರಿ ಎಂದು ಮೋದಿ ವಿರುದ್ಧ ಆನಂದ್ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.