ಮಂಗಳೂರು, ಮೇ 05: ಉತ್ತರ ಕ್ಷೇತ್ರದಲ್ಲಿ ಶಾಸಕ ಮೊಯ್ದೀನ್ ಬಾವಾ ಮಾಡಿದ ಸಾಧನೆ ಇತರ ಕ್ಷೇತ್ರಗಳಿಗೂ ಮಾದರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಸುರತ್ಕಲ್ ಬ್ಲಾಕ್ ಸಮಿತಿಯ ಕಾರ್ಪೊರೇಟರ್ಗಳು, ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಕುಂದಾಪುರದಿಂದ ವಲಸೆ ಬಂದವರು. ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಆದ ಅಭಿವೃದ್ಧಿಯ ಮಾಹಿತಿ ಗೊತ್ತಿಲ್ಲದೆ ಟೀಕಿಸುತ್ತಿದ್ದಾರೆ. ಮಂಗಳೂರು ಆರೋಗ್ಯ ನೀತಿಯಿಂದ ಹಿಡಿದು ರಸ್ತೆಯವರೆಗೆ ಜನ ಸಾಮಾನ್ಯನಿಗೆ ಬೇಕಾದ ಸವಲತ್ತು ಒದಗಿಸುವಲ್ಲಿ ಮೊದಲ ಐದು ವರ್ಷದಲ್ಲಿ ಮೊಯ್ದೀನ್ ಬಾವಾ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಬಡವರಿಗೆ ಉಚಿತ ಅಕ್ಕಿ ನೀಡಿದ್ದಾರೆ. ಗ್ಯಾಸ್ ಒದಗಿಸಿದ್ದಾರೆ. ನೆಮ್ಮದಿಯಿಂದ ಇರಲು ಸೂರು ಒದಗಿಸಿದ್ದಾರೆ. ಆದರೆ ಬಿಜೆಪಿ ಹೇಳುತ್ತಿದೆ ಕೇಂದ್ರದ ಅನುದಾನದಿಂದ ಕೊಡುತ್ತಿದ್ದಾರೆ. ಕಾಂಗ್ರೆಸ್ಸಿಗರದು ಬಿಟ್ಟಿ ಪ್ರಚಾರ ಎಂದು. ಬಿಜೆಪಿ ಆಡಳಿತವಿರುವ ಗುಜರಾತ್, ರಾಜಸ್ಥಾನ ಮತ್ತಿತರೆಡೆ ಇಂತಹ ಯೋಜನೆ ಯಾಕೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿದರು.
ಇದೀಗ ಬಿಜೆಪಿಗೆ ಟೀಕಿಸಲು ಯಾವುದೇ ವಿಚಾರಗಳು ಸಿಗುತ್ತಿಲ್ಲ. ಧರ್ಮಾಧಾರಿತ , ಜಾತಿ ವಿಷಯಗಳ ಬಗ್ಗೆ ಕೇಂದ್ರೀಕರಿಸಿ ಮತದಾರರನ್ನು ಉದ್ರೇಕಿಸುವ ಕೆಲಸ ಮಾಡುತ್ತಿದೆ. ಶಾಸಕ ಮೊಯ್ದೀನ್ ಬಾವಾ ಅವರು ಯಾವುದೇ ಪಕ್ಷ ಬೇಧವಿಲ್ಲದೆ ಅನುದಾನ ಹಂಚಿದ್ದಾರೆ. ಜಾತಿ ನೋಡದೆ ದೈವ ದೇವಸ್ಥಾನಗಳಿಗೆ ಅಭಿವೃದ್ಧಿಗಾಗಿ ಅನುದಾನ ನೀಡಿದ್ದಾರೆ. ರಸ್ತೆಗಳು ಶಾಶ್ವತವಾಗಿ ವಿಸ್ತರಣೆಯಾಗಿ ಕಾಂಕ್ರಿಟೀಕರಣವಾಗಿದೆ. ಕುಡಿಯುವ ನೀರಿನ ಸೌಲಭ್ಯವನ್ನು ಹಳ್ಳಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಾತಿಯಾಧಾರಿತವಾಗಿ ಆಡಳಿತ ನಡೆಸುವುದಿಲ್ಲ. ಅಭಿವೃದ್ಧಿ ಕಾಯಕವನ್ನು ಮುಂದಿಟ್ಟು ಮತ ಕೇಳುತ್ತದೆ. ಜನತೆ ಶಾಂತಿ, ನೆಮ್ಮದಿಯ ಜತೆ ಅಭಿವೃದ್ಧಿಯ ಸುರತ್ಕಲ್ ಪಟ್ಟಣವನ್ನು ನೋಡ ಬಯಸುತ್ತಾರೆ. ಹೊರತು ಜಾತಿ ಸಂಘರ್ಷ, ಕೋಮು ದ್ವೇಷದ ನಗರವನ್ನಲ್ಲ. ಬಿಜೆಪಿ ಆಡಳಿತಕ್ಕೆ ಬಂದಲ್ಲಿ ಮತ್ತೆ ನೆಮ್ಮದಿಯ ವಾತಾವರಣ ಕೆಡಲಿದೆ. ಕಾರ್ಯಕರ್ತರು ಸಾಧನೆಗಳ ಹರಿಕಾರ ಶಾಸಕ ಮೊಯ್ದೀನ್ ಬಾವಾ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.
ಶಾಸಕ ಬಾವಾ ಮಾತನಾಡಿ, ಬಿಜೆಪಿಗೆ ಟೀಕಿಸಲು ಕಾರಣ ಸಿಗುತ್ತಿಲ್ಲ. ಕೇಂದ್ರದ ಬಿಜೆಪಿ ಸರಕಾರ ಏನು ಮಾಡುತ್ತಿದೆ ಎಂಬುದನ್ನು ಮೊದಲು ಅವರು ಅರಿತುಕೊಳ್ಳಲಿ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಟ್ಟ ನಿಲುವು ಪ್ರದರ್ಶಿಸಿ 50 ಸಾವಿರ ರೂ ವರೆಗಿನ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಸಂದರ್ಭ ತಲಾ 15 ಲಕ್ಷ ರೂ ಹಾಕುವುದಾಗಿ ಭರವಸೆ ನೀಡಿದ್ದರೂ, ಒಂದೂ ರೂ. ಯಾರ ಖಾತೆಗೂ ಹಾಕಿಲ್ಲ. ಮತ್ತೆ ಬ್ಯಾಂಕು ವ್ಯವಹಾರಗಳು ಶ್ರೀಮಂತರ ಪಾಲಾಗುತ್ತಿವೆ ಎಂದು ಟೀಕಿಸಿದರು.