ಮಂಗಳೂರು, ಮೇ 05: ತಾಲೂಕಿನ ಮಲ್ಲೂರು ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವ ಕಡ್ಸಲೆ ನೆಲಕ್ಕೂರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದಲ್ಲಿ ಬಂಟ ದೈವದ ನೇಮೋತ್ಸವ ನಡೆಯುತ್ತಿದ್ದ ವೇಳೆ ಬಂಟ ದೈವದ ಪಾತ್ರಧಾರಿ ದೈವಸ್ಥಾನಕ್ಕೆ ಬಂದಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ಅವರಿಗೆ ಮಾಲೆ ಹಾಕುವಂತೆ ದೈವಸ್ಥಾನದ ಮುಖ್ಯಸ್ಥರಾದ ಮಂಜಯ್ಯ ಶೆಟ್ರ ಬಳಿ ಸೂಚನೆಯನ್ನು ನೀಡಿದ್ದರು. ಇದಕ್ಕೆ ಸ್ಥಳೀಯರು ಆಕ್ಷೇಪವನ್ನು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬಂಟ ದೈವದ ಪಾತ್ರಧಾರಿ ದೈವದ ಆಯುಧವನ್ನು ನೆಲಕ್ಕೆ ಊರಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದರು.
ದೈವಸ್ಥಾನದಲ್ಲಿ ನಡೆದ ಈ ಘಟನೆಯಲ್ಲಿ ಗ್ರಾಮಸ್ಥರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ದೈವ ಯಾರಿಗೂ ಮಾಲೆ ಹಾಕುವಂತೆ ಸೂಚಿಸುವ ಪದ್ಧತಿ ದೈವಾರಾಧನೆಯಲ್ಲಿ ಇಲ್ಲಿಯವರೆಗೂ ಕಂಡು ಬಂದಿಲ್ಲ. ಒಂದು ವೇಳೆ ಒಬ್ಬ ವ್ಯಕ್ತಿಯನ್ನು ಗೌರವಿಸುವುದಾದರೆ ಪ್ರಸಾದ ನೀಡಿ ಗೌರವಿಸಬಹುದಿತ್ತು. ಆದರೆ ಮಾಲೆ ಹಾಕುವ ಅನಿವಾರ್ಯ ಇರಲಿಲ್ಲ ಅನ್ನೋದು ಗ್ರಾಮಸ್ಥರ ಆರೋಪ.
ಮಲ್ಲೂರಿನ ಮಲರಾಯ ಧೂಮಾವತಿ-ಬಂಟ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಎಡೆಬಿಡದೆ ದುಡಿದಿದ್ದು, ಕೇವಲ ದೈವದ ಮೇಲೆ ಇಟ್ಟಿರುವ ನಂಬಿಕೆಯಿಂದ ಈ ಕಾರ್ಯವನ್ನು ನಡೆಸಿದ್ದಾರೆ. ಈ ನಡುವೆ ದೈವಕ್ಕೆ ಅಪಚಾರವಾಗುವಂತಹ ಕೆಲಸವನ್ನು ದೈವದ ಪಾತ್ರಧಾರಿ ಮಾಡಿರುವುದನ್ನು ಸಹಿಸಲಾರದೆ ಯುವಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಮಲ್ಲೂರಿನ ಗ್ರಾಮಸ್ಥರು ಸಾಮಾಜಿಕ ಜಾಲ ತಾಣದಲ್ಲಿ ಸ್ಪಷ್ಟನೆ ನೀಡಿದ್ದು, ಇದು ದೈವ ಪಾತ್ರಿಯಿಂದ ಆಗಿರುವ ಎಡವಟ್ಟು ಎಂದು ಹೇಳಿದ್ದಾರೆ. ದೈವಾರಾಧನೆ ಪದ್ಧತಿಯಲ್ಲಿ ದೈವಗಳು ಯಾರಿಗೂ ಮಾಲೆ ಹಾಕಲು ಸೂಚಿಸುವ ಕ್ರಮ ಇಲ್ಲ. ಆದರೆ ಅತಿಥಿಯಾಗಿ ಬಂದಿದ್ದ ಕ್ಷೇತ್ರದ ಅಭ್ಯರ್ಥಿಗೆ ಮಾಲೆ ಹಾಕಲು ಹೇಳಿರುವುದು ಸರ್ವಥಾ ಸರಿಯಲ್ಲ. ಇದು ದೈವಪಾತ್ರಿ ಮಾಡಿರುವ ಕೆಲಸವಾಗಿದೆ. ಈ ಘಟನೆಗೆ ಗ್ರಾಮಸ್ಥರು ಹೊಣೆಯಾಗುವುದಿಲ್ಲ. ಅಲ್ಲದೆ ದೈವ ಕಡ್ಸಲೆಯನ್ನು ನೆಲಕ್ಕೆ ಊರಿ ಅಪಾಯವಾಗುತ್ತದೆ ಎನ್ನುವ ಭೀತಿಯೂ ಗ್ರಾಮಸ್ಥರು ಭಯಪಡಬೇಕಾಗಿಲ್ಲ. ಇದಕ್ಕೆ ದೈವಪಾತ್ರಿಯೇ ಹೊಣೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ಇದೀಗ ದೈವ ಪಾತ್ರಧಾರಿ ಮಾಡಿರುವ ಈ ರೀತಿಯ ವರ್ತನೆ ಗ್ರಾಮಸ್ಥರ ಅಸಮಾಧಾನಕ್ಕೂ ಕಾರಣವಾಗಿದೆ.