ಮಂಗಳೂರು, ಮೇ 0 4: ಅಮಿತ್ ಶಾ ಅವರಲ್ಲಿ ನಾಯಕತ್ವದ ಯಾವುದೇ ಗುಣಗಳಿಲ್ಲ ಎಂದು ಶಾ ವಿರುದ್ಧ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.
ನಾವೇಕೆ ಅಮಿತ್ ಶಾ ಬಗ್ಗೆ ಮಾತಾಡುತ್ತೇವೆ..? ಆತನಲ್ಲಿ ನಾಯಕತ್ವದ ಯಾವ ಗುಣಗಳಿವೆ..? ಅಮಿತ್ ಶಾ ದೇಶಕ್ಕೆ ಯಾವುದಾದರೂ ಮಹೋನ್ನತ ಅಥವಾ ಪ್ರಗತಿಪರ ಚಿಂತನೆಗಳನ್ನು ನೀಡಿದ್ದಾರೆಯೇ..? ಬಿಜೆಪಿ ಮುಖಂಡರು ಬರೀ ಹಿಂದಿನ ವಿಷಯಗಳ ಕುರಿತು ಮಾತನಾಡುತ್ತಾರೆ. ನನ್ನ ಎರಡು ಪೀಳಿಗೆಯ ಹಿಂದಿನ ತಲೆಮಾರಿನ ಮುತ್ತಜ್ಜನ ಕುರಿತು ನನಗೆ ತಿಳಿದಿಲ್ಲ. ಟಿಪ್ಪು ಸುಲ್ತಾನ್ ಕಟ್ಟಿಕೊಂಡು ನಾನೇನು ಮಾಡಲಿ..? ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಲು ಆರಂಭಿಸಿದ ನಂತರ ನನಗೆ ಯಾವುದೇ ಪಾತ್ರಗಳ ಆಫರ್ ನೀಡುವುದನ್ನು ಬಾಲಿವುಡ್ ನಿಲ್ಲಿಸಿದೆ. ಆದರೆ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಕಳೆದ ವರ್ಷದ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ಟೀಕಿಸಿದ್ದು, ಬಳಿಕ ತಮ್ಮನ್ನು ಹಿಂದಿ ಸಿನಿಮಾ ರಂಗ ಮೂಲೆಗುಂಪು ಮಾಡಿದೆ. ನಾನು ಬಹಿರಂಗವಾಗಿ ಧ್ವನಿ ಎತ್ತಲು ಆರಂಭಿಸಿದಾಗಿನಿಂದ ಹಿಂದಿ ಚಿತ್ರರಂಗದಿಂದ ಯಾವುದೇ ಆಹ್ವಾನ ಬಂದಿಲ್ಲ ಎಂದು ರೈ ದೂರಿದ್ದಾರೆ.
ಇದೀಗ ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ಹೆಚ್ಚುತ್ತಿವೆ. ಅದು ವೈಯಕ್ತಿಕ ತೇಜೋವಧೆ ಇರಬಹುದು ಅಥವಾ ಬೆದರಿಕೆ ಮೂಲಕ ಇರಬಹುದು. ಆದರೆ ನನ್ನ ಕೆಲಸವನ್ನು ತಡೆಯಲು ಸಾಧ್ಯವಿಲ್ಲ. ಈ ಎಲ್ಲಾ ಕೆಲಸ ಮಾಡುತ್ತಿರುವುದು ಬಿಜೆಪಿ ಎಂದು ಹೇಳಿದ್ದಾರೆ.