ಮಂಗಳೂರು, ಮೇ 04: ಜನತೆ ಆಶೀರ್ವಾದ ಮಾಡಿ ಅಧಿಕಾರ ಕೊಟ್ಟ ನಂತರ ಅದಕ್ಕೆ ಪ್ರತಿಫಲವಾಗಿ ಅಭಿವೃದ್ಧಿ ಕೆಲಸವನ್ನು ಮಾಡಬೇಕು ಎಂದು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದೀನ್ ಬಾವಾ ಹೇಳಿದ್ದಾರೆ.
ಮಂಗಳೂರು, ಸುರತ್ಕಲ್, ಕಡಂಬೋಡಿ ಮತ್ತಿತರ ಪ್ರದೇಶದಲ್ಲಿ ಬಿರುಸಿನ ಮತಯಾಚನೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಜನತೆ ಬಿಜೆಪಿಗೆ ಆಶೀರ್ವಾದ ನೀಡಿದ್ದರು. ಆದರೆ ಆ ಸಂದರ್ಭ ಬಿಜೆಪಿ ಪಕ್ಷದಲ್ಲಿ ಪರಸ್ಪರ ಕಚ್ಚಾಟ, ಭ್ರಷ್ಟಾಚಾರ ನಡೆಸಿ ಮೂವರು ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ. ಇದೇ ಅವರ ಸಾಧನೆ ಎಂದು ದೂರಿದರು.
ಜನತೆ ಆಶೀರ್ವಾದ ನೀಡಿ ಅಧಿಕಾರ ನೀಡಿದ ನಂತರ ಅದಕ್ಕೆ ಪ್ರತ್ಯುತ್ತರವಾಗಿ ಅಭಿವೃದ್ಧಿ ಕೆಲಸವನ್ನು ಮಾಡಬೇಕು. ಅದು ಬಿಟ್ಟು ಪರಸ್ಪರ ಕಚ್ಚಾಟ ನಡೆಸಿಕೊಂಡು, ಪರಸ್ಪರ ಕಾಲು ಎಳೆದುಕೊಂಡು ಭ್ರಷ್ಟಾಚಾರ ಮಾಡುವುದಲ್ಲ. ಬಿಜೆಪಿಯ ಅಂದಿನ ಮುಖ್ಯಮಂತ್ರಿ ಸೇರಿದಂತೆ ಸಚಿವರು ಜೈಲು ಪಾಲಾಗಿರುವುದು ಇದಕ್ಕೆ ತಾಜಾ ಉದಾಹರಣೆ. ಜೈಲು ಸೇರಿದ ಅಂದಿನ ಮುಖ್ಯಮಂತ್ರಿಯನ್ನೇ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ಬಿಜೆಪಿಯ ಅಭಿವೃದ್ಧಿ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ. ಕಳಂಕಿತ ವ್ಯಕ್ತಿಯನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಬಿಜೆಪಿಯ ಇನ್ನೊಂದು ಮುಖ ಬಯಲಾಗಿದೆ. ಇದನ್ನು ಜನತೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿಗೆ ಒಳಜಗಳದಿಂದಾಗಿ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಇನ್ನು ಅವರಿಂದ ಅನುದಾನ ಬಿಡುಗಡೆ, ರಾಜ್ಯದ ಅಭಿವೃದ್ಧಿ ಸಾಧ್ಯವೆ..? ಜನತಾ ಕಾಲನಿ ಜನತೆಗೆ ಮೂಲಸೌಕರ್ಯ ಒದಗಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ತಾನು ಅಧಿಕಾರ ಸ್ವೀಕರಿಸಿದ ಬಳಿಕ ರಸ್ತೆ ವಿಸ್ತರಣೆ, ಕಾಂಕ್ರಟೀಕರಣ, ಅಲ್ಲಿನ ದೈವ ದೇವಸ್ಥಾನಗಳಿಗೆ ಅನುದಾನ ಮಂಜೂರು ಮಾಡಿಸಿಕೊಟ್ಟಿದ್ದೇನೆ. ಹೀಗಾಗಿ ಅಭಿವೃದ್ಧಿ ಮಾಡಿದ ಪಕ್ಷಕ್ಕೆ ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆಯಿದೆ ಎಂದರು.
ಹಂಗಾಮಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಪೂಜಾರಿ, ಕೆ. ಸದಾಶಿವ ಶೆಟ್ಟಿ, ಬಶೀರ್ ಬೈಕಂಪಾಡಿ, ಗೋವರ್ದನ್ ಶೆಟ್ಟಿಗಾರ್, ವಿಜಯ್ ಆಚಾರ್ಯ, ಮೆಹಸೂಫ್ ಮತ್ತಿತರರು ಉಪಸ್ಥಿತರಿದ್ದರು.