ಕಾಸರಗೋಡು, ಮೇ 04 : ವಿದೇಶದಲ್ಲಿ ಸಮುದ್ರದಲ್ಲಿ ಮುಳುಗಿ ಕಾಸರಗೋಡು ನಿವಾಸಿಯೋರ್ವ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಚೆಂಗಳ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಅವರ ಪುತ್ರ ಶಕೀರ್ ಸೈಫ್ ( 24 ) ಮೃತಪಟ್ಟವರು. ಜೊತೆಯಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ದುಬೈಯಲ್ಲಿ ಸಂಬಧಿಕರೋರ್ವರ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಶಕೀರ್ ಗುರುವಾರ ರಾತ್ರಿ ಕೆಲಸ ಮುಗಿಸಿ ಇಬ್ಬರು ಸ್ನೇಹಿತರ ಜೊತೆ ಕಾರಿನಲ್ಲಿ ಜುಮೈರಾ ಬೀಚ್ ಬೀಚ್ ಗೆ ತೆರಳಿದ್ದರು. ಅಲ್ಲಿ ಸಮುದ್ರದಲ್ಲಿ ಸ್ನಾನಕ್ಕಿಳಿದ ಸಂದರ್ಭ ಈ ಘಟನೆ ನಡೆದಿದೆ. ಜೊತೆಯಲ್ಲಿದ್ದ ಇಬ್ಬರನ್ನು ರಕ್ಷಿಸಿದರೂ ಶಕೀರ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನಾಲ್ಕು ವರ್ಷದಿಂದ ದುಬೈಯಲ್ಲಿ ಉದ್ಯೋಗದಲ್ಲಿರುವ ಶಕೀರ್ ಆರು ತಿಂಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಗುರುವಾರ ರಾತ್ರಿ ಘಟನೆ ನಡೆದಿದೆ ಎಂದು ಮನೆಯವರಿಗೆ ಮಾಹಿತಿ ಲಭಿಸಿದೆ. ಇದೀಗ ಮೃತದೇಹವನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.