ಕಾಸರಗೋಡು, ಮೇ 04: ತಂದೆ, ತಾಯಿ, ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಅಡೂರು ಸಮೀಪ ದ ಮೊಟ್ಟಕುಂಜದಲ್ಲಿ ನಡೆದಿದೆ.
ಮೃತಪಟ್ಟವರನ್ನು ರಾಧಾಕೃಷ್ಣ(44) , ಪತ್ನಿ ಪ್ರಸೀದಾ(35), ಮಕ್ಕಳಾದ ಕಾಶಿನಾಥ್ (5) ಮತ್ತು ಶಬರಿನಾಥ್(3) ಎಂದು ಗುರುತಿಸಲಾಗಿದೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಾಲ್ವರು ಪತ್ತೆಯಾಗಿದ್ದಾರೆ. ಮಕ್ಕಳನ್ನು ಕೊಲೆಗೈದು ಬಳಿಕ ದಂಪತಿ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಸಂಜೆ ಆರು ಗಂಟೆ ತನಕ ಮಕ್ಕಳು ಮನೆಯಂಗಳದಲ್ಲಿ ಆಟವಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ರಾತ್ರಿಯಾದರೂ ಮನೆಯಲ್ಲಿ ದೀಪಗಳು ಉರಿಯದಿದ್ದುದರಿಂದ ಸ್ಥಳೀಯರು ಬಂದು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆದೂರು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದು , ತನಿಖೆ ನಡೆಸುತ್ತಿದ್ದಾರೆ.