ಮೇ, 03 :ಧೂಳಿನ ಚಂಡಮಾರುತ ಹಾಗೂ ಮಳೆಗೆ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿನ ಸುಮಾರು 90ಕ್ಕೂ ಅಧಿಕ ಮಂದಿ ಬಲಿಯಾದ ಬಗ್ಗೆ ವರದಿಯಾಗಿದೆ. ಮೇ 02 ರ ಬುಧವಾರ ಸಂಜೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಎರಡೂ ರಾಜ್ಯಗಳಲ್ಲಿ ಹಲವು ಮನೆಗಳು ಕುಸಿದಿದೆ. ಅಲ್ಲದೆ, ಎರಡು ರಾಜ್ಯಗಳ ಜನತೆಗೆ ಸಾಕಷ್ಟು ತೊಂದರೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆಗ್ರಾ ಜಿಲ್ಲೆಯಲ್ಲಿ ಗಂಟೆಗೆ 126 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದ ಬಗ್ಗೆ . ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶದಲ್ಲಿ ಮರಳು, ಮಣ್ಣು ಹಾಗೂ ಧೂಳಿನ ಚಂಡಮಾರುತಕ್ಕೆ 64 ಮಂದಿ ಸಾವಿಗೀಡಾಗಿದ್ದು, ಸುಮಾರು 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಗ್ರಾದಲ್ಲಿ ಮಕ್ಕಳು ಸಹಿತ 43 ಮಂದಿ ಮೃತಪಟ್ಟಿದ್ದು,ಬಿಜ್ನೋರ್, ಸಹರಾನ್ಪುರ ಹಾಗೂ ಬರೇಲಿಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದ ಬಿಕನೇರ್ನಲ್ಲಿ ಧೂಳಿನ ಚಂಡಮಾರುತಕ್ಕೆ 27 ಮಂದಿ ಬಲಿಯಾಗಿದ್ದಾರೆ ಹಾಗೂ 100ಕ್ಕೂ ಅಧಿಕ ಜನತೆ ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಗ್ರಾ ಜಿಲ್ಲೆಯಲ್ಲಿ ಮೃತಪಟ್ಟ ಸಂತ್ರಸ್ಥರ ಕುಟುಂಬಕ್ಕೆ ಜಿಲ್ಲಾಡಳಿತದಿಂದ ತಲಾ 4 ಲಕ್ಷ ಪರಿಹಾರ ಘೋಷಿಸಿದೆ.
ರಾಜಸ್ಥಾನದಲ್ಲೂ ಭಾರಿ ಬಿರುಗಾಳಿ, ಧೂಳಿನ ಚಂಡಮಾರುತಕ್ಕೆ 33 ಮಂದಿ ಬಲಿಯಾಗಿದ್ದಾರೆ. ಆಳ್ವಾರ್, ಭರತ್ಪುರ ಹಾಗೂ ಧೋಲ್ಪುರ ಜಿಲ್ಲೆಗಳಲ್ಲಿ ಭಾರಿ ಚಂಡಮಾರುತ ಬೀಸಿದ್ದು, ಹಲವು ಮನೆಗಳು ಕುಸಿದು ಬಿದ್ದಿದೆ. ಆಳ್ವಾರ್ ಜಿಲ್ಲೆಯಲ್ಲಿ ಹೆಚ್ಚು ಬಿರುಗಾಳಿ ಬೀಸಿದ್ದು, ಜಿಲ್ಲೆಯ ಬಹುತೇಕ ಕಡೆ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ರಾಜಸ್ಥಾನ ಸಿಎಂ ವಸುಂಧರಾ ರಾಜೇ ಘಟನೆಯಲ್ಲಿ ಮೃತಪಟ್ಟ ಸಂತ್ರಸ್ಥರ ಕುಟುಂಬಗಳಿಗೆ 4 ಲಕ್ಷ ಹಾಗೂ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.